×
Ad

ಛತ್ತೀಸ್ ಗಢ ರೈಲು ಅಪಘಾತ: ತನಿಖೆಯಲ್ಲಿ ರೈಲು ಕೆಂಪು ದೀಪವನ್ನು ಉಲ್ಲಂಘಿಸಿರುವುದು ಪತ್ತೆ

Update: 2025-11-09 21:58 IST

Photo Credit : PTI

ರಾಯ್ಪುರ್: ರೈಲು ಸಿಬ್ಬಂದಿಗಳು ಕೆಂಪು ದೀಪವನ್ನು ಉಲ್ಲಂಘಿಸಿ ರೈಲು ಚಲಾಯಿಸಿದ್ದರಿಂದ, ನವೆಂಬರ್ 4ರಂದು 11 ಮಂದಿಯನ್ನು ಬಲಿ ಪಡೆದಿದ್ದ ಛತ್ತೀಸ್ ಗಢದಲ್ಲಿನ ಬಿಲಾಸ್ಪುರ್ ಬಳಿಯ ರೈಲು ಅಪಘಾತ ಸಂಭವಿಸಿದೆ ಎಂಬ ಸಂಗತಿ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಘಟನೆಯಲ್ಲಿ ತನ್ನೆದುರು ಚಲಿಸುತ್ತಿದ್ದ ಗೂಡ್ಸ್ ರೈಲಿಗೆ ಗವೇರಾ ರಸ್ತೆಯಿಂದ ಬಿಲಾಸ್ಪುರ್ ಗೆ ತೆರಳುತ್ತಿದ್ದ ರೈಲು ಡಿಕ್ಕಿ ಹೊಡೆದಿತ್ತು.

ಆದರೆ, ರೈಲು ತಿರುವಿನಲ್ಲಿ ಸಿಗ್ನಲ್ ದೀಪಗಳ ಗೋಚರತೆ ಪ್ರಮಾಣ ಮಂದವಾಗಿದ್ದುದರಿಂದ ರೈಲಿನ ಲೋಕೋಪೈಲಟ್ ಗೆ ಎರಡು ಭಿನ್ನ ಹಳಿಗಳ ಸಿಗ್ನಲ್ ದೀಪವನ್ನು ಗುರುತಿಸುವಲ್ಲಿ ಗೊಂದಲವುಂಟಾಗಿದೆ ಎಂದು ಲೋಕೋಪೈಲಟ್ ಸಂಘಟನೆ ವಾದಿಸಿತ್ತು. ಈ ಕುರಿತು ಸತ್ಯಶೋಧನೆ ನಡೆಸಿದ್ದ ವಿವಿಧ ಇಲಾಖೆಗಳ ಹಿರಿಯ ರೈಲ್ವೆ ಅಧಿಕಾರಿಗಳ ತಂಡ, ಈ ಅಪಘಾತವು ಅಪಾಯಕಾರಿ ವಲಯದ ಬಳಿ ಸಿಗ್ನಲ್ ದಾಟುವಿಕೆ (Signal Passed At Danger) ಪ್ರವರ್ಗಕ್ಕೆ ಸೇರುತ್ತದೆ ಎಂದು ತನ್ನ ವರದಿಯಲ್ಲಿ ಅಭಿಪ್ರಾಯ ಪಟ್ಟಿದೆ.

ಅಪಘಾತಕ್ಕೀಡಾದ ರೈಲು ಅದೇ ಹಳಿಯಲ್ಲಿ ಸಾಗುತ್ತಿದ್ದ ಗೂಡ್ಸ್ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಆ ರೈಲಿನ ಲೋಕೋಪೈಲಟ್ ವಿದ್ಯಾಸಾಗರ್ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಅವರ ಸಹಾಯಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಈ ಅಪಘಾತಕ್ಕೆ ಕಾರಣವಾದ ಸನ್ನಿವೇಶಗಳ ಕುರಿತು ಹೇಳಿಕೆ ನೀಡುವ ಸ್ಥಿತಿಯಲ್ಲಿ ಅವರಿಲ್ಲ ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಮೆಮು ಪ್ಯಾಸೆಂಜರ್ ರೈಲುಗಳನ್ನು ಓರ್ವ ಲೋಕೋಪೈಲಟ್ ಮಾತ್ರ ಚಲಾಯಿಸುತ್ತಾರೆ. ಆದರೆ, ರೈಲು ಸಂಖ್ಯೆ 68733(ಗವೇರಾ ರಸ್ತೆಯಿಂದ ಬಿಲಾಸ್ಪರ್ ಮಾರ್ಗ)ರ ಲೋಕೋಪೈಲಟ್ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಇದ್ದುದರಿಂದ, ಅವರಿಗೆ ಸಹಾಯಕ ಪೈಲಟ್ ಅನ್ನು ಒದಗಿಸಲಾಗಿತ್ತು ಎಂದು ಆಗ್ನೇಯ ಕೇಂದ್ರ ರೈಲ್ವೆ ವಲಯದ ಆಲ್ ಇಂಡಿಯಾ ಲೋಕೊ ರನ್ನಿಂಗ್ ಸ್ಟ್ಯಾಫ್ ಅಸೋಸಿಯೇಷನ್ ಮೂಲಗಳು ತಿಳಿಸಿವೆ.

“ಅಪಾಯ ವಲಯದ ಬಳಿಯ ಸಿಗ್ನಲ್ ಅನ್ನು ನಿಯಂತ್ರಿಸುವಲ್ಲಿ ರೈಲಿನ ಸಿಬ್ಬಂದಿಗಳು ವಿಫಲಗೊಂಡಿದ್ದರಿಂದ, ಗೂಡ್ಸ್ ರೈಲಿನ ಹಿಂಬದಿ ಬ್ರೇಕ್ ವ್ಯಾನ್ ಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದಿದೆ. ಇದರಿಂದಾಗಿ ಈ ಅಪಘಾತವು ಅಪಾಯಕಾರಿ ವಲಯದ ಬಳಿ ಸಿಗ್ನಲ್ ದಾಟುವಿಕೆ ಪ್ರಕರಣವಾಗಿ ಮಾರ್ಪಟ್ಟಿದೆ. ಅಪಾಯದ ಸಿಗ್ನಲ್ ಸಮೀಪಿಸುವುದಕ್ಕೂ ಮುನ್ನ, ರೈಲನ್ನು ಸೂಕ್ತ ಸಮಯದಲ್ಲಿ ನಿಯಂತ್ರಿಸುವಲ್ಲಿ ಹಾಗೂ ಅದನ್ನು ಸೂಕ್ತವಾಗಿ ನಿಲ್ಲಿಸುವಲ್ಲಿ ರೈಲು ಸಿಬ್ಬಂದಿಗಳು ವಿಫಲರಾಗಿರುವುದರಿಂದ, ಅವರನ್ನು ಈ ಅಪಘಾತದ ಹೊಣೆಗಾರರನ್ನಾಗಿಸಲಾಗಿದೆ” ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News