×
Ad

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ನೂತನ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್

Update: 2025-02-18 13:23 IST

ಜ್ಞಾನೇಶ್ ಕುಮಾರ್ (Photo:X/@SpokespersonECI)

ಹೊಸದಿಲ್ಲಿ: ಕೇಂದ್ರ ಚುನಾವಣಾ ಆಯೋಗದ ನೂತನ ಮುಖ್ಯ ಆಯುಕ್ತರಾಗಿ ನೇಮಕಗೊಂಡ ಜ್ಞಾನೇಶ್ ಕುಮಾರ್ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ಧತಿ ತೀರ್ಮಾನದ ಅನುಷ್ಠಾನ, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು hindustantimes.com ವರದಿಯಲ್ಲಿ ಉಲ್ಲೇಖಿಸಿದೆ.

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿ ಮಾಜಿ ಐಎಎಸ್ ಅಧಿಕಾರಿ ಜ್ಞಾನೇಶ್ ಕುಮಾರ್ ಅವರನ್ನು ಕೇಂದ್ರ ಸರಕಾರ ನೇಮಿಸಿದೆ. ಜ್ಞಾನೇಶ್ ಕುಮಾರ್ ನೇಮಕಾತಿಗೆ ಕಾಂಗ್ರೆಸ್ ಟೀಕಿಸಿದ್ದು, ತರಾತುರಿಯ ನಿರ್ಧಾರ ಎಂದು ಹೇಳಿದೆ.

1988ನೆಯ ಬ್ಯಾಚ್ ನ ಕೇರಳ ಕೇಡರ್ ನ ಐಎಎಸ್ ಅಧಿಕಾರಿಯಾದ ಜ್ಞಾನೇಶ್ ಕುಮಾರ್ ಕೇರಳ ಸರಕಾರದಲ್ಲಿ ವಿವಿಧ ಜವಾಬ್ಧಾರಿಗಳನ್ನು ನಿರ್ವಹಿಸಿದ್ದಾರೆ. 2019ರಲ್ಲಿ ಜಮ್ಮು, ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಗೃಹ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ 2018 ಮತ್ತು 2021ರ ನಡುವೆ ಜಮ್ಮು, ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ಧತಿ ತೀರ್ಮಾನ ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನರೇಂದ್ರ ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆಯನ್ನು ರೂಪಿಸುವ ಜವಾಬ್ದಾರಿಯನ್ನು ಜ್ಞಾನೇಶ್ ಕುಮಾರ್ ಅವರಿಗೆ ನೀಡಿತ್ತು.

ಮಾರ್ಚ್ 15, 2024ರಂದು ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಜ್ಞಾನೇಶ್ ಕುಮಾರ್ ಅವರನ್ನು ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಿಸಲಾಗಿದೆ. ಜ್ಞಾನೇಶ್ ಕುಮಾರ್ ಅವರು ಈ ಮೊದಲು ರಕ್ಷಣಾ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ, ಗೃಹ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ ಮತ್ತು ಹೆಚ್ಚುವರಿ ಕಾರ್ಯದರ್ಶಿಯಾಗಿ, ಸಂಸದೀಯ ವ್ಯವಹಾರಗಳ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಮತ್ತು ಸಹಕಾರ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಜನವರಿ 31, 2024ರಂದು ನಿವೃತ್ತರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News