'ಆಪರೇಷನ್ ಸಿಂಧೂರ್' ವೇಳೆ ಭಾರತದ ಸೇನಾ ಚಲನವಲನಗಳ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದ ಚೀನಾ: ಉನ್ನತ ಸೇನಾ ಅಧಿಕಾರಿಯ ಹೇಳಿಕೆ
PC : ANI
ಹೊಸದಿಲ್ಲಿ: 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಸಂದರ್ಭದಲ್ಲಿ ಪಾಕಿಸ್ತಾನವು ಭಾರತದ ಪ್ರಮುಖ ಸೇನಾ ಚಲನೆಗಳ ಕುರಿತು ನೈಜ ಸಮಯದ ಮಾಹಿತಿ ಚೀನಾದಿಂದ ನೇರವಾಗಿ ಪಡೆದಿದೆ ಎಂದು ಲೆಫ್ಟಿನೆಂಟ್ ಜನರಲ್ ರಾಹುಲ್ ಆರ್. ಸಿಂಗ್ ತಿಳಿಸಿದ್ದಾರೆ.
ದಿಲ್ಲಿಯಲ್ಲಿ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (FICCI) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ್ ವೇಳೆ ಭಾರತವು ಏಕಕಾಲದಲ್ಲಿ ಮೂರು ದೇಶಗಳ ಯುದ್ಧ ತಂತ್ರವನ್ನು ಎದುರಿಸಬೇಕಾಗಿ ಬಂದಿತ್ತು ಎಂದು ಪಾಕಿಸ್ತಾನ, ಚೀನಾ ಮತ್ತು ತುರ್ಕಿಯ ವನ್ನು ಉಲ್ಲೇಖಿಸಿ ಹೇಳಿದರು.
"DGMO ಮಟ್ಟದ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನವು – 'ನಿಮ್ಮ ಪ್ರಮುಖ ಸೇನಾ ವಾಹಕ ಸಿದ್ಧವಾಗಿದೆ. ಅದು ಕ್ರಮಕ್ಕೆ ತಯಾರಾಗಿದೆ' ಎಂದು ಸ್ಪಷ್ಟವಾಗಿ ಉಲ್ಲೇಖಿಸಿತ್ತು. ಈ ಮಾಹಿತಿ ಅವರಿಗೆ ಚೀನಾದ ನೇರ ಸಹಾಯದಿಂದಲೇ ದೊರಕುತ್ತಿತ್ತು," ಎಂದು ಜನರಲ್ ಸಿಂಗ್ ಅವರು ವಿವರಿಸಿದರು.
"ಪಾಕಿಸ್ತಾನ ಮುಂಚೂಣಿಯಲ್ಲಿತ್ತು. ಚೀನಾ ಎಲ್ಲ ರೀತಿಯ ಬೆಂಬಲ ನೀಡುತ್ತಿತ್ತು. ತುರ್ಕಿಯವು ತನ್ನ ಶಕ್ತಿಯ ಮಟ್ಟಿಗೆ ಪಾಕಿಸ್ತಾನಕ್ಕೆ ತೀವ್ರ ಬೆಂಬಲ ಒದಗಿಸುತ್ತಿತ್ತು," ಎಂದು ಅವರು ಹೇಳಿದರು.
"ಚೀನಾ ಪಾಕಿಸ್ತಾನವನ್ನು ತನ್ನ ಶಸ್ತ್ರಾಸ್ತ್ರ ಪರೀಕ್ಷೆಯ 'ಲೈವ್ ಲ್ಯಾಬ್' ಆಗಿ ಬಳಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಪಾಕಿಸ್ತಾನ ಮಿಲಿಟರಿ ಶಸ್ತ್ರಾಸ್ತ್ರಗಳ ಪೈಕಿ 81% ಚೀನಾದಿಂದಲೇ ಪಡೆಯುತ್ತಿದೆ. ಬೇರೆ ದೇಶಗಳ ಶಸ್ತ್ರಾಸ್ತ್ರಗಳ ಮುಂದೆ ತನ್ನ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಲು ಚೀನಾ ಸಮರಥ ಎಂದು ಸಿಂಗ್ ಅಭಿಪ್ರಾಯಪಟ್ಟರು.
ಚೀನಾ ತನ್ನ ಯುದ್ಧ ತಂತ್ರಗಳಲ್ಲಿ ನೇರ ಭಾಗವಹಿಸುವುದಕ್ಕಿಂತ ಪಾಕಿಸ್ತಾನ ಮುಂತಾದ ಮೂರನೇ ಪಕ್ಷಗಳನ್ನು ಉಪಯೋಗಿಸುತ್ತಿದೆ. ಇದು 'ಎರವಲು ಪಡೆದ ಚಾಕುವಿನಿಂದ ಕೊಲ್ಲು' ಎನ್ನುವ ಚೀನಾದ ಯುದ್ಧ ತಂತ್ರದ ನಿಖರ ಉದಾಹರಣೆ, ಎಂದು ಸಿಂಗ್ ಹೇಳಿದರು.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ತುರ್ಕಿಯಾದ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ನಡುವಿನ ಭೇಟಿಯನ್ನು ಜನರಲ್ ರಾಹುಲ್ ಸಿಂಗ್ ಉಲ್ಲೇಖಿಸಿದರು. ತುರ್ಕಿಯಾವು ಪಾಕಿಸ್ತಾನಕ್ಕೆ ಬೆಂಬಲ ನೀಡುವುದಾಗಿ ಪುನರಾವರ್ತಿಸಿಕೊಂಡಿದ್ದು, ಗುಪ್ತಚರ ಮಾಹಿತಿ ವಿನಿಮಯ ಹಾಗೂ ಭಯೋತ್ಪಾದನೆ ನಿರ್ವಹಣೆಯಂಥಾ ಕ್ಷೇತ್ರದಲ್ಲಿ ಆಳವಾದ ಸಹಕಾರ ನೀಡುತ್ತಿದೆ.
2025ರ ಏಪ್ರಿಲ್ 22 ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ನಡೆಸಿದ ಭೀಕರ ದಾಳಿಯಲ್ಲಿ 26 ಮಂದಿ ಬಲಿಯಾದರು. ಇದಕ್ಕೆ ಪ್ರತಿಯಾಗಿ, ಭಾರತ ಮೇ 7 ರಂದು 'ಆಪರೇಷನ್ ಸಿಂಧೂರ್' ಆರಂಭಿಸಿತು.
ಕಾರ್ಯಾಚರಣೆಯ ವೇಳೆ ಪಾಕಿಸ್ತಾನದ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ನಿಖರ ದಾಳಿ ನಡೆಸಿದ ಭಾರತ, 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಿತು. ಆ ಬಳಿಕ ಪಾಕಿಸ್ತಾನ ಭಾರತದ ಮೇಲೆ ಡ್ರೋನ್ ದಾಳಿಗಳನ್ನು ಪ್ರಾರಂಭಿಸಿದ ಬಳಿಕ, ನಾಲ್ಕು ದಿನಗಳ ಕಾಲ ಗಡಿ ಪ್ರದೇಶದಲ್ಲಿ ತೀವ್ರ ಸಂಘರ್ಷ ನಡೆಯಿತು. ಜಮ್ಮು-ಕಾಶ್ಮೀರ ಮತ್ತು ಪಂಜಾಬ್‌ನಲ್ಲಿ ಹತ್ತುಕ್ಕೂ ಹೆಚ್ಚು ನಾಗರಿಕರು ಪ್ರಾಣ ಕಳೆದುಕೊಂಡರು.
ಮೇ 10 ರಂದು ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡರು. ಈ ಘಟನೆ ಭಾರತ-ಪಾಕಿಸ್ತಾನ-ಚೀನಾ ಸಂಬಂಧಗಳಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ.