×
Ad

ಸಿಜೆಐ ಗವಾಯಿಯವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನನ್ನು ಅಮಾನತುಗೊಳಿಸಿದ ಬಾರ್ ಕೌನ್ಸಿಲ್

Update: 2025-10-06 22:25 IST

ಸಿಜೆಐ ಗವಾಯಿ | Photo Credit : PTI

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ನಡೆಯುತ್ತಿದ್ದ ವೇಳೆ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಪ್ರಕರಣದಲ್ಲಿ ವಕೀಲ ರಾಕೇಶ್ ಕಿಶೋರ್ ನನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ತಕ್ಷಣದಿಂದಲೇ ಅಮಾನತುಗೊಳಿಸಿದೆ.

ನೂತನ ಆದೇಶದ ಅನ್ವಯ ಇನ್ಮುಂದೆ ಕಿಶೋರ್ ಗೆ ದೇಶದ ಯಾವುದೇ ನ್ಯಾಯಾಲಯದಲ್ಲಿ ವಕಾಲತ್ತು ಮಾಡುವುದಕ್ಕೆ ಅಥವಾ ವಾದಿಸಲು ಅವಕಾಶವಿರುವುದಿಲ್ಲ.

71 ವರ್ಷದ ಕಿಶೋರ್, ದೆಹಲಿಯ ಮಯೂರ್ ವಿಹಾರ್ ನಿವಾಸಿಯಾಗಿದ್ದು, ಸೋಮವಾರ ಬೆಳಿಗ್ಗೆ 11.35 ರ ಸಮಯದಲ್ಲಿ ನ್ಯಾಯಾಲಯ ಸಂಖ್ಯೆ 1 ರಲ್ಲಿ ನಡೆಯುತ್ತಿದ್ದ ವಿಚಾರಣೆಯ ವೇಳೆ ತನ್ನ ಶೂ ಗಳನ್ನು ಸಿಜೆಐ ಪೀಠದ ಕಡೆ ಎಸೆಯಲು ಯತ್ನಿಸಿದ್ದ. ಭದ್ರತಾ ಸಿಬ್ಬಂದಿ ತಕ್ಷಣವೇ ಆತನನ್ನು ಹಿಡಿದು ಹೊರಗೆ ಕರೆದುಕೊಂಡು ಹೋದರು.

ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ಪ್ರಕಟಿಸಿದ ಮಧ್ಯಂತರ ಆದೇಶದಲ್ಲಿ, ಈ ಕೃತ್ಯವು “ನ್ಯಾಯಾಲಯದ ಘನತೆಗೆ ವಿರುದ್ಧವಾದದ್ದು” ಮತ್ತು “ವೃತ್ತಿಪರ ನೀತಿಶಾಸ್ತ್ರದ ಉಲ್ಲಂಘನೆ” ಎಂದು ಉಲ್ಲೇಖಿಸಲಾಗಿದೆ. ಆದೇಶದಲ್ಲಿ, ಕಿಶೋರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು 15 ದಿನಗಳಲ್ಲಿ ಸ್ಪಷ್ಟನೆ ನೀಡಲು ನೋಟಿಸ್ ನೀಡಲಾಗಿದೆ.

ದಿಲ್ಲಿಯ ಬಾರ್ ಕೌನ್ಸಿಲ್ ಈ ಆದೇಶವನ್ನು ಎಲ್ಲಾ ನ್ಯಾಯಾಲಯಗಳಿಗೆ ತಿಳಿಸಿ ಅದನ್ನು ಕಟ್ಟು ನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಲು ಸೂಚಿಸಲಾಗಿದೆ. ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಗಳು ಮತ್ತು ಜಿಲ್ಲಾ ನ್ಯಾಯಾಲಯಗಳು ಈ ಆದೇಶದ ಪ್ರತಿಗಳನ್ನು ಸಂಬಂಧಿತ ಬಾರ್ ಅಸೋಸಿಯೇಷನ್‌ ಗಳಿಗೆ ಹಂಚಲಿವೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News