SIR ಒತ್ತಡದಿಂದ ಮೃತಪಟ್ಟ ಮತಗಟ್ಟೆ ಅಧಿಕಾರಿಗಳು ಸೇರಿದಂತೆ 39 ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ: ಮಮತಾ ಬ್ಯಾನರ್ಜಿ ಘೋಷಣೆ
ಮಮತಾ ಬ್ಯಾನರ್ಜಿ | Photo Credit : PTI
ಕೋಲ್ಕತಾ: ಆತ್ಮಹತ್ಯೆ ಪ್ರಕರಣಗಳು ಸೇರಿದಂತೆ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನದ ಕೆಲಸದ ಒತ್ತಡದಿಂದ ಮೃತಪಟ್ಟ 39 ಮಂದಿಯ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮಂಗಳವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ನಾಲ್ವರು ಮತಗಟ್ಟೆ ಅಧಿಕಾರಿಗಳು ಸೇರಿದಂತೆ 39 ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರ ನೀಡಲಾಗುವುದು. ಇದೇ ವೇಳೆ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಕೆಲಸದ ಒತ್ತಡದಿಂದ ಅಸ್ವಸ್ಥಗೊಂಡಿರುವ ನಾಲ್ವರು ಮತಗಟ್ಟೆ ಅಧಿಕಾರಿಗಳು ಸೇರಿದಂತೆ 13 ಮಂದಿ ಅಧಿಕಾರಿಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ.
ನವೆಂಬರ್ 4ರಿಂದ ಜಾರಿಗೊಳಿಸಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನದಿಂದ ಸಾರ್ವಜನಿಕರಲ್ಲಿ ವ್ಯಾಪಕ ಪ್ರಮಾಣದ ಭೀತಿ ಹಾಗೂ ಗಾಬರಿ ಸೃಷ್ಟಿಯಾಗಿದೆ ಎಂಬ ಸಂಗತಿ ಸರಕಾರದ ಮೌಲ್ಯಮಾಪನದ ವೇಳೆ ಕಂಡು ಬಂದಿದೆ ಎಂದೂ ಅವರು ಹೇಳಿದ್ದಾರೆ.
ರಾಜ್ಯ ಸಚಿವಾಲಯ ನಬನ್ನಾದಲ್ಲಿ 14 ವರ್ಷಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, "ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಗಾಬರಿಯಿಂದ ನಾಲ್ವರು ಮತಗಟ್ಟೆ ಅಧಿಕಾರಿಗಳು ಸೇರಿದಂತೆ 39 ಮಂದಿ ಸಾಮಾನ್ಯ ನಾಗರಿಕರು ಮೃತಪಟ್ಟಿದ್ದಾರೆ" ಎಂದು ಮಾಹಿತಿ ನೀಡಿದ್ಸಾರೆ.