×
Ad

ಸ್ವಘೋಷಿತ ಗೋರಕ್ಷಕರಿಂದ ಹತ್ಯೆಯಾದ ಸಬೀರ್ ಮಲಿಕ್ ಪತ್ನಿಗೆ ನೇಮಕಾತಿ ಪತ್ರ ಹಸ್ತಾಂತರಿಸಿದ ಮಮತಾ ಬ್ಯಾನರ್ಜಿ

Update: 2024-09-05 13:25 IST

Photo : x/@sagarikaghose

ಕೋಲ್ಕತ್ತಾ : ಆ.27ರಂದು ಹರ್ಯಾಣದಲ್ಲಿ ಗೋರಕ್ಷಕರಿಂದ ಹತ್ಯೆಗೀಡಾದ ಶಿಬ್‌ಗಂಜ್‌ನ ಸಬೀರ್ ಮಲಿಕ್ ಅವರ ವಿಧವೆ ಶಕೀಲಾ ಸರ್ದಾರ್ ಅವರಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಉದ್ಯೋಗ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ್ದಾರೆ.

ದಕ್ಷಿಣ 24 ಪರಗಣಗಳ ಬಸಂತಿಯಲ್ಲಿ ಬಿಎಲ್ ಮತ್ತು ಎಲ್ಆರ್ಒ ಕಚೇರಿಯಲ್ಲಿ ಅಟೆಂಡರ್ ಹುದ್ದೆಯನ್ನು ನೀಡಲಾಗಿದೆ.

ಸಿಎಂ ಮಮತಾ ಬ್ಯಾನರ್ಜಿ ಇದೇ ವೇಳೆ ದಂಪತಿಯ 2 ವರ್ಷದ ಮಗಳು ಸಾನಿಯಾಗೆ ಚಾಕಲೇಟ್ ಮತ್ತು ಬಿಸ್ಕೆಟ್ ನೀಡಿದ್ದು, ಅಕ್ವೇರಿಯಂನ್ನು ಕೂಡ ತೋರಿಸಿ ಮಗುವಿನ ಜೊತೆ ಕುಶಲೋಪರಿ ನಡೆಸಿದ್ದಾರೆ. ಇದೇ ವೇಳೆ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುವುದಾಗಿ ಮಮತಾ ಬ್ಯಾನರ್ಜಿ ಶಕೀಲಾ ಸರ್ದಾರ್ ಗೆ ಭರವಸೆಯನ್ನು ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಕೀಲಾ, ಗುರುವಾರದಿಂದ ಕೆಲಸಕ್ಕೆ ಸೇರಲು ತಿಳಿಸಲಾಗಿದೆ ಮತ್ತು ಸ್ಥಳೀಯ ಪಂಚಾಯತ್ ಪ್ರಧಾನರು ನನ್ನನ್ನು ಕಚೇರಿಗೆ ಕರೆದುಕೊಂಡು ಹೋಗಲಿದ್ದಾರೆ. ಸಿಎಂ ಟೀ ಮತ್ತು ಬಿಸ್ಕೆಟ್ ನೀಡಿ ತನ್ನ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಆರು ವರ್ಷಗಳ ಹಿಂದೆ ಸಬೀರ್ ಅವರನ್ನು ವಿವಾಹವಾದ ಶಕೀಲಾ, ಮೂರು ವರ್ಷಗಳಿಂದ ಹರಿಯಾಣದ ಚಾರ್ಕಿ ದಾದ್ರಿ ಪ್ರದೇಶದ ಬಾಲ್ಡಾ ಬಜಾರ್‌ನಲ್ಲಿ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದರು.

ಗೋಮಾಂಸ ಸೇವನೆ ಆರೋಪದಲ್ಲಿ ಗೋರಕ್ಷಕರು ನನ್ನ ತಂದೆ ನೂರುದ್ದೀನ್ ಮತ್ತು ಸಹೋದರ ಸುಜಾವುದ್ದೀನ್ ಅವರ ಮೇಲೆ ರಸ್ತೆಯಲ್ಲಿ ಹಲ್ಲೆ ನಡೆಸಿದ್ದಾರೆ. ಅದೃಷ್ಟವಶಾತ್ ಸ್ಥಳೀಯ ಪೊಲೀಸರು ಇಬ್ಬರನ್ನು ರಕ್ಷಿಸಿದ್ದಾರೆ. ಆದರೆ, ಕೊಠಡಿಯನ್ನು ಸ್ವಚ್ಛಗೊಳಿಸುವ ನೆಪದಲ್ಲಿ ಕೆಲವರು ನನ್ನ ಪತಿಯನ್ನು ಕರೆದೊಯ್ದಿದ್ದರು. ಆ ಬಳಿಕ ಅವರ ದೇಹವು ಕಾಲುವೆಯಲ್ಲಿ ಪತ್ತೆಯಾಗಿತ್ತು. ಪೊಲೀಸ್ ಠಾಣೆಯಲ್ಲಿದ್ದ ನನ್ನ ಸಹೋದರ ನನಗೆ ಫೋನ್ ಮಾಡಿ ಶವ ಪತ್ತೆಯಾಗಿದೆ ಎಂದು ಹೇಳಿದರು. ನಾವು ಗೋಮಾಂಸ ತಿಂದಿಲ್ಲ, ಆದರೆ ಅದೇ ನೆಪದಲ್ಲಿ ನನ್ನ ಪತಿಯನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ನನ್ನ ಸಹೋದರ ಗೋರಕ್ಷಕರ ವಿರುದ್ಧ ಸಾಕ್ಷಿ ಹೇಳಿದ್ದು, ಅವನು ಕೊಲ್ಲಲ್ಪಡಬಹುದು ಎಂದು ಹೆದರಿಕೊಂಡಿದ್ದಾನೆ. ಆ.29ರಂದು ಆಂಬ್ಯುಲೆನ್ಸ್ ನಲ್ಲಿ ಸಬೀರ್ ಅವರ ದೇಹವನ್ನು ತಮ್ಮ ಗ್ರಾಮಕ್ಕೆ ತಂದಾಗ, ಎಸಿ ಕಾರ್ಯನಿರ್ವಹಿಸದ ಕಾರಣ ಅದು ಕೊಳೆತು ಕೆಟ್ಟದಾಗಿ ವಾಸನೆ ಬರುತ್ತಿತ್ತು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News