ಚುನಾವಣಾ ಕರ್ತವ್ಯಕ್ಕೆ ಗೌರವಧನ ಹೆಚ್ಚಿಸಿದ ಆಯೋಗ
ಹೊಸದಿಲ್ಲಿ: ಚುನಾವಣೆ ನಡೆಸುವ ಕರ್ತವ್ಯದಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಗೌರವಧನವನ್ನು ಹೆಚ್ಚಿಸಿ ಶುಕ್ರವಾರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಉಪ ಜಿಲ್ಲಾ ಚುನಾವಣಾ ಅಧಿಕಾರಿ (ಡಿಇಓ) ಮತ್ತು ಚುನಾವಣೆಯ ಭದ್ರತಾ ಕರ್ತವ್ಯ ನಿರ್ವಹಿಸುವ ಸಿಆರ್‌ಪಿಎಫ್ ಸಿಬ್ಬಂದಿಯ ಗೌರವಧನವನ್ನೂ ಹೆಚ್ಚಿಸಲಾಗಿದೆ.
ಪರಿಷ್ಕೃತ ದರದ ಪ್ರಕಾರ ಮತಗಟ್ಟೆಯ ಮುಖ್ಯ ಅಧಿಕಾರಿಗೆ ದಿನಕ್ಕೆ 500 ರೂಪಾಯಿ, ಮತಗಟ್ಟೆ ಅಧಿಕಾರಿಗೆ 400 ರೂಪಾಯಿ ಅಥವಾ ಒಟ್ಟು 1600 ರೂಪಾಯಿ ನೀಡಲಾಗುತ್ತದೆ. ಈ ಮೊದಲು ಕ್ರಮವಾಗಿ 350 ರೂಪಾಯಿ ಅಥವಾ 250 ರೂಪಾಯಿ ನೀಡಲಾಗುತ್ತಿತ್ತು. ಮತ ಎಣಿಕೆ ಸಹಾಯಕರಿಗೆ ದಿನಕ್ಕೆ 450 ರೂಪಾಯಿ ಅಥವಾ ಒಟ್ಟಾಗಿ 1350 ರೂಪಾಯಿ ನೀಡಲು ಉದ್ದೇಶಿಸಲಾಗಿದೆ. ಈ ಮೊದಲು 250 ರೂಪಾಯಿ ಗೌರವಧನ ನೀಡಲಾಗುತ್ತಿತ್ತು.
ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗುವ ಕೇಂದ್ರ/ ರಾಜ್ಯ ಸರ್ಕಾರಿ, ಕೇಂದ್ರ ಸರ್ಕಾರದ ಸ್ವಾಮ್ಯದ ಮತ್ತು ಸ್ಥಳೀಯ ಸಂಸ್ಥೆಯ ಕ್ಲಾಸ್ 4 ಸಿಬ್ಬಂದಿಗೆ ದಿನಕ್ಕೆ 350 ರೂಪಾಯಿ ಅಥವಾ ಒಟ್ಟು 1400 ರೂಪಾಯಿ ನೀಡಲಾಗುವುದು. ವೀಡಿಯೊ ಕಣ್ಗಾವಲು ತಂಡ, ಮಾಧ್ಯಮ ಪ್ರಮಾಣೀಕರಣ ತಂಡ ಮತ್ತು ಚುನಾವಣಾ ವೆಚ್ಚ ನಿಗಾ ವಿಭಾಗದ ಸಿಬ್ಬಂದಿಗೆ 3000 ರೂಪಾಯಿ ನೀಡಲಾಗುವುದು. ಸೂಕ್ಷ್ಮ ವೀಕ್ಷಕರ ಗೌರವಧನವನ್ನು ದುಪ್ಪಟ್ಟುಗೊಳಿಸಿ 2000 ರೂಪಾಯಿ ನಿಗದಿಪಡಿಸಲಗಿದೆ.
ಉಪ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಇನ್ನು ಮುಂದೆ ಮಾಸಿಕ ಮೂಲವೇತನದ ಅರ್ಧಕ್ಕೆ ಕಡಿಮೆ ಇಲ್ಲದಂತೆ ಗೌರವಧನ ನೀಡಲಾಗುವುದು. ಇವರಿಗೆ ಈ ಮೊದಲು ಯಾವುದೇ ಗೌರವಧನ ನೀಡುತ್ತಿರಲಿಲ್ಲ. 15 ದಿನ ಅಥವಾ ಕಡಿಮೆ ಅವಧಿಗೆ ನಿಯೋಜಿತರಾಗುವ ಸಿಎಪಿಎಫ್ ನ ಗಜೆಟೆಡ್ ಅಧಿಕಾರಿಗಳ ಗೌರವಧನವನ್ನು 2500 ರೂಪಾಯಿಗಳಿಂದ 4000 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. 15 ದಿನಕ್ಕಿಂತ ಹೆಚ್ಚಿನ ಅವಧಿಗೆ ನಿಯೋಜಿತರಾದರೆ ವಾರಕ್ಕೆ 2000 ರೂಪಾಯಿ ಗೌರವಧನ ನೀಡಲಾಗುವುದು. ಇವರ ಅಧೀನದಲ್ಲಿರುವ ಸಿಎಪಿಎಫ್ ಅಧಿಕಾರಿಗಳು ಕ್ರಮವಾಗಿ 3000 ಹಾಗೂ ವಾರಕ್ಕೆ 1500 ರೂಪಾಯಿ ಪಡೆಯಲಿದ್ದಾರೆ. ಅಂತೆಯೇ ಸಿಎಪಿಎಫ್ ಅಧಿಕಾರಿಗಳಿಗೆ 15 ದಿನಕ್ಕಿಂತ ಕಡಿಮೆ ಅವಧಿಗೆ 2500 ರೂಪಾಯಿ ಮತ್ತು ಹೆಚ್ಚಿನ ಅವಧಿಗೆ ನಿಯೋಜಿತರಾದರೆ ವಾರಕ್ಕೆ 1250 ರೂಪಾಯಿ ನೀಡಲಾಗುತ್ತಿದೆ. ಪ್ರಸ್ತುತ ಕ್ರಮವಾಗಿ 1500 ರೂಪಾಯಿ ಹಾಗೂ 750 ರೂಪಾಯಿ ಗೌರವಧನ ನೀಡಲಾಗುತ್ತಿದೆ.