×
Ad

ಸೇನೆಗೆ ನಷ್ಟಕ್ಕಿಂತ ಸಮಗ್ರ ಫಲಿತಾಂಶ ಮುಖ್ಯ: ಜನರಲ್ ಅನಿಲ್ ಚೌಹಾನ್

Update: 2025-06-03 20:18 IST

ಅನಿಲ್ ಚೌಹಾಣ್ | PC : PTI 

ಪುಣೆ: ವೃತ್ತಿಪರ ಸೇನೆಗಳ ಮೇಲೆ ತಾತ್ಕಾಲಿಕ ನಷ್ಟಗಳು ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಅವುಗಳಿಗೆ ಒಟ್ಟಾರೆ ಫಲಿತಾಂಶ ಅತಿ ಮುಖ್ಯವಾಗಿರುತ್ತದೆ ಎಂದು ರಕ್ಷಣಾ ಪಡೆಗಳ ವರಿಷ್ಠ ಅನಿಲ್ ಚೌಹಾಣ್ ಮಂಗಳವಾರ ತಿಳಿಸಿದ್ದಾರೆ.

‘ಸಾವಿರ ಗಾಯಗಳೊಂದಿಗೆ ಭಾರತದ ರಕ್ತಸ್ರಾವವಾಗುವಂತೆ ಮಾಡಬೇಕು’ ಎಂಬ ನಿಲುವನ್ನು ಪಾಕ್ ಅನುಸರಿಸುತ್ತಿದೆ. ಆದರೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸುವ ಮೂಲಕ ಭಾರತವು ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಹೊಸ ಕೆಂಪು ಗೆರೆಯನ್ನು ಎಳೆದಿದೆಯೆಂದು ಅವರು ತಿಳಿಸಿದರು.

ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯವು ಮಂಗಳವಾರ ಆಯೋಜಿಸಿದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚೌಹಾಣ್ ಅವರು, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಆರಂಭದಲ್ಲಿ ಅನಿರ್ದಿಷ್ಟ ಸಂಖ್ಯೆಯ ಯುದ್ಧ ವಿಮಾನಗಳನ್ನು ಭಾರತವು ಕಳೆದುಕೊಂಡಿದೆಯೆಂಬುದನ್ನು ಒಪ್ಪಿಕೊಂಡರು.

‘‘ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಂದರ್ಶಕರು ನಮ್ಮ (ಭಾರತೀಯ ಸೇನೆ) ಕಡೆಯಲ್ಲಿ ಆಗಿರುವ ನಷ್ಟದ ಬಗ್ಗೆ ಪ್ರಶ್ನಿಸಿದಾಗ , ನಾನು ನಷ್ಟಗಳು ಮುಖ್ಯವಲ್ಲ, ಫಲಿತಾಂಶ ಮುಖ್ಯವಾಗಿರುತ್ತದೆ ಎಂದು ಹೇಳಿದೆ’್ದ’ ಎಂದವರು ಹೇಳಿದರು.

ನಷ್ಟಗಳ ಬಗ್ಗೆ ಮಾತನಾಡುವುದು ಸರಿಯಲ್ಲವೆಂದು ಚೌಹಾಣ್ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.‘‘ ಯುದ್ಧದಲ್ಲಿ ಒಂದು ವೇಳೆ ಹಿನ್ನಡೆಗಳು ಉಂಟಾದರೂ ಕೂಡಾ, ನೀವು ನಿಮ್ಮ ನೈತಿಕತೆಯನ್ನು ಕಾಪಾಡಿಕೊಳ್ಳಬೇಕಾದ ಅಗತ್ಯವಿರುತ್ತದೆ’’ ಎಂದು ಎಂದರು.

ರಾಜಕೀಯ ಹಾಗೂ ಹಿಂಸಾಚಾರ ಸೇರಿದಂತೆ ಯುದ್ಧದ ವಿವಿಧ ಅಂಶಗಳ ಬಗ್ಗೆ ರಕ್ಷಣಾ ಪಡೆಗಳ ವರಿಷ್ಠರು ಸಂವಾದದಲ್ಲಿ ಗಮನಸೆಳೆದರು. ಆಪರೇಷನ್ ಸಿಂಧೂರದಲ್ಲಿಯೂ ಯುದ್ಧ ಹಾಗೂ ರಾಜಕೀಯವು ಸಮಾನಾಂತರದ ವಿದ್ಯಮಾನವಾಗಿ ಸಂಭವಿಸಿರುವುದಾಗಿ ಅವರು ಹೇಳಿದರು.

ಪಹಲ್ಗಾಮ್ನಲ್ಲಿ ಸಂತ್ರಸ್ತರ ಮೇಲೆ ಭಯೋತ್ಪಾದಕರು ಅಗಾಧವಾದ ಕ್ರೌರ್ಯವನ್ನು ಎಸಗಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕೆಲವೇ ವಾರಗಳ ಮೊದಲು ಪಾಕಿಸ್ತಾನದ ಸೇನಾ ವರಿಷ್ಠ ಜನರಲ್  ಅಸೀಮ್ ಮುನೀರ್ ಅವರು ಭಾರತಹಾಗೂ ಹಿಂದೂ ಧರ್ಮೀಯರ ವಿರುದ್ಧ ‘ವಿಷಕಾರಿದ್ದರು’ ಎಂದರು.

ಸಿಡಿಎಸ್ ಭಾಷಣದ ಹೈಲೈಟ್ಸ್

► ಪಾಕಿಸ್ತಾನದ ಸರಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಬೇಕು ಹಾಗೂ ಆ ದೇಶವು ಭಾರತವನ್ನು ಭಯೋತ್ಪಾದನೆಗೆ ಒತ್ತೆಯಾಳಾಗಿ ಇರಿಸಬಾರದೆಂಬುದೇ ‘ಆಪರೇಷನ್ ಸಿಂಧೂರ’ದ ಹಿಂದಿರುವ ಚಿಂತನೆಯಾಗಿದೆ.

► ಭಾರತವು ಭಯೋತ್ಪಾದನೆ ಹಾಗೂ ಅಣ್ವಸ್ತ್ರ ಬ್ಲ್ಯಾ ಕ್ ಮೇಲ್ ನ ನೆರಳಿನಡಿ ಬದುಕಲು ಬಯಸುವುದಿಲ್ಲ.

►  ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದಲ್ಲಿನ ಗುರಿಗಳ ಮೇಲೆ ಅತ್ಯಂತ ಕರಾರುವಾಕ್ಕಾದ ದಾಳಿಗಳನ್ನು ನಡೆಸಿದವು ಮತ್ತು ಕೆಲವು ದಾಳಿಗಳನ್ನು ಕೇವಲ ಎರಡು ಮೀಟರ್ ಅಂತರದಲ್ಲಿ ನಡೆಸಲಾಗಿತ್ತು.

►ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಪಾಕಿಸ್ತಾನವು ಭಾರತದ ವಿರುದ್ಧ 48 ತಾಸುಗಳ ಪ್ರತಿದಾಳಿ ಕಾರ್ಯಾಚರಣೆಗಳನ್ನು ನಡೆಸುವ ಯೋಜನೆ ಹೂಡಿತ್ತು. ಆದರೆ ಅದು ಕೇವಲ 8 ತಾಸುಗಳಲ್ಲೇ ಅದನ್ನು ಕೊನೆಗೊಳಿಸಿತ್ತು ಹಾಗೂ ಅವರು ಮಾತುಕತೆಯನ್ನು ಬಯಸಿದರು ಎಂದರು.

► ಕಾರ್ಯಾಚರಣೆ ಮುಂದುವರಿದಲ್ಲಿ ತಾನು ಇನ್ನೂ ಹೆಚ್ಚು ಯಾತನೆ ಪಡಬೇಕಾದೀತೆಂದು ಪಾಕಿಸ್ತಾನಕ್ಕೆ ಮನವರಿಕೆಯಾದ್ದರಿಂದ ಅದು ಮೇ 10ಂದು ಭಾರತದೊಂದಿಗೆ ಮಾತುಕತೆ ನಿರ್ಧರಿಸಿತ್ತು.

► ಪಾಕಿಸ್ತಾನದಿಂದ ಮಾತುಕತೆ ಹಾಗೂ ಸಂಘರ್ಷಾವಸ್ಥೆಯನ್ನು ಅಂತ್ಯಗೊಳಿಸಬೇಕೆಂಬ ಪ್ರಸ್ತಾವ ಬಂದಾಗ ನಾವು ಅದನ್ನು ಸ್ವೀಕರಿಸಿದೆವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News