ಮಲಯಾಳಂ ಭಾಷಾ ಮಸೂದೆಯ ಕುರಿತು ಎದ್ದಿರುವ ಕಳವಳಗಳು ವಾಸ್ತವವನ್ನು ಪ್ರತಿಫಲಿಸುವುದಿಲ್ಲ: ಸಿಎಂ ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್ | Photo Credit : PTI
ತಿರುವನಂತಪುರಂ: ಮಲಯಾಳಂ ಭಾಷಾ ಮಸೂದೆಯ ಕುರಿತು ಎದ್ದಿರುವ ಕಳವಳಗಳನ್ನು ಶನಿವಾರ ತಳ್ಳಿ ಹಾಕಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವು ವಾಸ್ತವಗಳನ್ನು ಆಧರಿಸಿಲ್ಲ ಎಂದು ಹೇಳಿದ್ದಾರೆ. ಪ್ರಸ್ತಾವಿತ ಶಾಸನದ ಕುರಿತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದಿದ್ದ ಪತ್ರದಲ್ಲಿ ಬಲವಾದ ಆಕ್ಷೇಪಣೆ ವ್ಯಕ್ತಪಡಿಸಿದ ಬಳಿಕ, ಪಿಣರಾಯಿ ವಿಜಯನ್ ಅವರು ಎಕ್ಸ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.
ಭಾಷಾ ಅಲ್ಪಸಂಖ್ಯಾತರು ಹಾಗೂ ದೇಶದ ಬಹುಸಾಂಸ್ಕೃತಿಕ ಗುಣವನ್ನು ರಕ್ಷಿಸಬೇಕಾದ ಅಗತ್ಯವಿದೆ. ಒಂದು ವೇಳೆ ಈ ಕಾಯ್ದೆಯನ್ನು ಜಾರಿಗೊಳಿಸಿದರೆ, ಲಭ್ಯವಿರುವ ಎಲ್ಲ ಸಾಂವಿಧಾನಿಕ ಪರಿಹಾರಗಳನ್ನು ಬಳಸಿಕೊಂಡು ಕರ್ನಾಟಕ ಈ ಮಸೂದೆಯನ್ನು ವಿರೋಧಿಸಲಿದೆ ಎಂದು ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ಎಚ್ಚರಿಸಿದ್ದರು.
ಇದಕ್ಕೂ ಮುನ್ನ, ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಸಿದ್ದರಾಮಯ್ಯ, “ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆ–2025 ಮಲಯಾಳಂ ಭಾಷೆಯನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲೂ ಮೊದಲ ಭಾಷೆಯನ್ನಾಗಿ ಕಡ್ಡಾಯಗೊಳಿಸುವ ಮೂಲಕ, ಭಾಷಾ ಸ್ವಾತಂತ್ರ್ಯ ಹಾಗೂ ಕೇರಳ ಗಡಿ ಜಿಲ್ಲೆಗಳಲ್ಲಿನ ಜೀವಂತ ವಾಸ್ತವದ ಮೇಲೆ ದಾಳಿ ನಡೆಸುತ್ತಿದೆ, ವಿಶೇಷವಾಗಿ ಕಾಸರಗೋಡಿನಲ್ಲಿ” ಎಂದು ಕಳವಳ ವ್ಯಕ್ತಪಡಿಸಿದ್ದರು.
ಈ ಬೆಳವಣಿಗೆಗಳ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಪಿಣರಾಯಿ ವಿಜಯನ್, “ಜಾತ್ಯತೀತತೆ ಮತ್ತು ಬಹುಸಾಂಸ್ಕೃತಿಕ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ನಾವು ದೃಢವಾಗಿ ನಿಲ್ಲುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
“ಪ್ರಸ್ತಾವಿತ ಮಸೂದೆಯು ಸ್ಪಷ್ಟ ಹಾಗೂ ನಿಸ್ಸಂದಿಗ್ಧ ಅನುಚ್ಛೇದವನ್ನು ಒಳಗೊಂಡಿದ್ದು, ಈ ಅನುಚ್ಛೇದವು ಭಾಷಾ ಅಲ್ಪಸಂಖ್ಯಾತರ, ವಿಶೇಷವಾಗಿ ಕನ್ನಡ ಮತ್ತು ತಮಿಳು ಭಾಷಿಕ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುತ್ತದೆ” ಎಂದು ಅವರು ತಿಳಿಸಿದ್ದಾರೆ. ಈ ಪೋಸ್ಟ್‌ನೊಂದಿಗೆ ಮಸೂದೆಯಲ್ಲಿ ಕಲ್ಪಿಸಲಾಗಿರುವ ಸೂಕ್ತ ಅವಕಾಶಗಳ ಛಾಯಾಚಿತ್ರವನ್ನೂ ಅವರು ಹಂಚಿಕೊಂಡಿದ್ದಾರೆ.