ಅಮೆರಿಕದಿಂದ ಪನಾಮಕ್ಕೆ ಭಾರತೀಯ ವಲಸಿಗರ ಗಡೀಪಾರು | ಅತ್ಯಂತ ಅಮಾನವೀಯ, ಅವಮಾನಕರ: ಕಾಂಗ್ರೆಸ್
PC : PTI
ಹೊಸದಿಲ್ಲಿ: ಅಕ್ರಮ ಭಾರತೀಯ ವಲಸಿಗರನ್ನು ಅಮೆರಿಕದಿಂದ ಘನತೆಯಿಂದ ಭಾರತಕ್ಕೆ ಕಳುಹಿಸುವ ಬದಲು ಪನಾಮಕ್ಕೆ ಗಡೀಪಾರು ಮಾಡಿರುವುದನ್ನು ಕಾಂಗ್ರೆಸ್ ಶುಕ್ರವಾರ ಆಕ್ಷೇಪಿಸಿದೆ.
ಕಳೆದ ವಾರಾಂತ್ಯದಲ್ಲಿ, ಭಾರತೀಯರು ಸೇರಿದಂತೆ 299 ವಲಸಿಗರನ್ನು ಅಮೆರಿಕದಿಂದ ಪನಾಮಕ್ಕೆ ಕಳುಹಿಸಿರುವುದಕ್ಕೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಈ ವಲಸಿಗರನ್ನು ಬಳಿಕ ಪನಾಮದಿಂದ ಅವರ ತವರು ದೇಶಗಳಿಗೆ ಕಳುಹಿಸಲಾಗುತ್ತದೆ.
‘‘ಅತ್ಯಂತ ಅಮಾನವೀಯ ಮತ್ತು ಅವಮಾನಕರ ರೀತಿಯಲ್ಲಿ ಗಡೀಪಾರುಗಳು ನಡೆಯುತ್ತಿವೆ’’ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಆರೋಪಿಸಿದ್ದಾರೆ.
‘‘ಟ್ರಂಪ್ ಸರಕಾರವು ಗಡೀಪಾರು ಮಾಡುವ ಭಾರತೀಯ ನಾಗರಿಕರನ್ನು ಭಾರತಕ್ಕೆ ಗೌರವಯುತವಾಗಿ ಕಳುಹಿಸಿಕೊಡಲಾಗುವುದು ಎಂದು ನಾವು ಭಾವಿಸಿದ್ದೆವು. ಆದರೆ, ಈ ಗಡೀಪಾರುಗಳು ಅತ್ಯಂತ ಅಮಾನವೀಯ ಮತ್ತು ಅವಮಾನಕರ ರೀತಿಯಲ್ಲಿ ನಡೆಯುತ್ತಿವೆ’’ ಎಂದು ರಮೇಶ್ ಬರೆದಿದ್ದಾರೆ.
ಇದಕ್ಕೂ ಮೊದಲು, ಅಮೆರಿಕವು 300ಕ್ಕೂ ಅಧಿಕ ಭಾರತೀಯ ವಲಸಿಗರನ್ನು ದೇಶಕ್ಕೆ ಕಳುಹಿಸಿದೆ. ಅವರನ್ನು ಹೊತ್ತ ಮೂರು ಸೇನಾ ವಿಮಾನಗಳು ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿದಿವೆ.
►ವಲಸಿಗರನ್ನು ಪನಾಮ, ಕೋಸ್ಟರಿಕಕ್ಕೆ ಯಾಕೆ ಕಳುಹಿಸಲಾಗಿದೆ?
ಗಡೀಪಾರುಗೊಳ್ಳುತ್ತಿರುವ ವಲಸಿಗರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕಕ್ಕೆ ಸಹಾಯ ಮಾಡಲು ಪನಾಮ ಮತ್ತು ಕೋಸ್ಟರಿಕ ದೇಶಗಳು ಒಪ್ಪಿಕೊಂಡಿವೆ. ಜೊತೆಗೆ, ಮರುಸ್ವೀಕರಿಸಲು ನಿರಾಕರಿಸಿರುವ ದೇಶಗಳಿಗೆ ಸೇರಿದ ವಲಸಿಗರಿಗೆ ತಾತ್ಕಾಲಿಕ ತಂಗುದಾಣವಾಗಲೂ ಈ ದೇಶಗಳು ಮುಂದೆ ಬಂದಿವೆ.
ಭಾರತ, ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ, ಇರಾನ್ ಮುಂತಾದ ದೇಶಗಳಿಗೆ ಸೇರಿದ 299 ವಲಸಿಗರು ಪನಾಮದಲ್ಲಿದ್ದಾರೆ. ಹಾಗೆಯೇ, ಭಾರತ, ಪಾಕಿಸ್ತಾನ, ಕಿರ್ಗಿಸ್ತಾನ, ಕಝಖ್‌ಸ್ತಾನ ಮತ್ತು ಉಝ್ಬೆಕಿಸ್ತಾನ ಮುಂತಾದ ದೇಶಗಳಿಗೆ ಸೇರಿದ 200 ವಲಸಿಗರನ್ನು ಸ್ವೀಕರಿಸಲು ಕೋಸ್ಟರಿಕ ಒಪ್ಪಿದೆ.
ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ, ವಲಸಿಗರು ಈಗ ಪನಾಮದ ಕಾರ್ಯವ್ಯಾಪ್ತಿಯಲ್ಲಿರುತ್ತಾರೆ ಮತ್ತು ಅವರಿಗೆ ಸಂಬಂಧಿಸಿದ ಯಾವ ಜವಾಬ್ದಾರಿಯೂ ಅಮೆರಿಕಕ್ಕಿಲ್ಲ.
►ಪನಾಮ ಹೊಟೇಲ್‌ನಿಂದ ನೆರವು ಕೋರಿದ ವಲಸಿಗರು
ಹದಿಮೂರು ವಲಸಿಗರನ್ನು ಅವರ ತವರು ದೇಶಗಳಿಗೆ ಕಳುಹಿಸಲಾಗಿದೆ ಎಂದು ಪನಾಮ ಸರಕಾರ ತಿಳಿಸಿದೆ. ಇನ್ನೂ 175 ಮಂದಿ ಸ್ವಯಂಪ್ರೇರಿತವಾಗಿ ತಮ್ಮ ದೇಶಗಳಿಗೆ ಮರಳಲು ಒಪ್ಪಿದ್ದಾರೆ. ಅವರನ್ನು ಈಗ ಡೆಕಪೊಲಿಸ್ ಎಂಬ ಹೊಟೇಲ್‌ನಲ್ಲಿ ಇಡಲಾಗಿದೆ. ಇತರ ಕೆಲವರನ್ನು ಡೇರಿಯನ್ ಅರಣ್ಯಕ್ಕೆ ಸಮೀಪದಲ್ಲಿರುವ ದೂರದ ಕಟ್ಟಡವೊಂದಕ್ಕೆ ವರ್ಗಾಯಿಸಲಾಗಿದೆ.
ಡೆಕಪೊಲಿಸ್ ಹೊಟೇಲ್‌ನಲ್ಲಿರುವ ಕೆಲವು ಗಡೀಪಾರುಗೊಂಡ ವಲಸಿಗರು ಹೊರಗಿರುವ ಮಾಧ್ಯಮ ವರದಿಗಾರರತ್ತ ಕೈಬೀಸುತ್ತಿರುವುದನ್ನು ತೋರಿಸುವ ವೀಡಿಯೊಗಳನ್ನು ಸುದ್ದಿ ಸಂಸ್ಥೆಗಳು ಪ್ರಸಾರಿಸಿವೆ. ಕೆಲವು ವಲಸಿಗರು ಸಹಾಯ ಕೋರುವ ಫಲಕಗಳನ್ನು ಎತ್ತಿ ಹಿಡಿದಿದ್ದರು.
► ವಲಸಿಗರನ್ನು ಬಂಧನದಲ್ಲಿಟ್ಟಿಲ್ಲ: ಪನಾಮ
ಅಮೆರಿಕದಿಂದ ಗಡೀಪಾರಾಗಿರುವ ಅಕ್ರಮ ವಲಸಿಗರನ್ನು ಬಂಧನದಲ್ಲಿಡಲಾಗಿದೆ ಎಂಬ ವರದಿಗಳನ್ನು ಪನಾಮದ ಭದ್ರತಾ ಸಚಿವ ಫ್ರಾಂಕ್ ಅಬ್ರೆಗೊ ನಿರಾಕರಿಸಿದ್ದಾರೆ. ‘‘ಪನಾಮ ನಾಗರಿಕರ ಸುರಕ್ಷತೆ ಮತ್ತು ಶಾಂತಿಯನ್ನು ಗಮನದಲ್ಲಿಟ್ಟುಕೊಂಡು ಈ ವಲಸಿಗರಿಗೆ ನಮ್ಮ ದೇಶದಲ್ಲಿ ಸುತ್ತಾಡಲು ಅವಕಾಶ ನಿರಾಕರಿಸಲಾಗಿದೆ. ಔಷಧ ಮತ್ತು ಆಹಾರ ಸೇರಿದಂತೆ ಅವರ ಎಲ್ಲಾ ಪ್ರಾಥಮಿಕ ಅವಶ್ಯಕತೆಗಳನ್ನು ನಾವು ಪೂರೈಸುತ್ತಿದ್ದೇವೆ’’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.
► ಆರು ವಾರಗಳ ಕಾಲ ಬಂಧನದಲ್ಲಿ?
ಅಮೆರಿಕದಿಂದ ಗಡೀಪಾರುಗೊಂಡವರು ತಮ್ಮ ತಮ್ಮ ದೇಶಗಳಿಗೆ ವಾಪಸಾಗುವ ಮುನ್ನ ಆರು ವಾರಗಳವರೆಗೆ ಅವರನ್ನು ವಲಸಿಗರ ಆಶ್ರಯ ಕೇಂದ್ರದಲ್ಲಿ ಇಡಬಹುದಾಗಿದೆ ಎಂದು ಕೋಸ್ಟರಿಕ ಅಧ್ಯಕ್ಷ ರೋಡ್ರಿಗೊ ಚವೆಶಸ್ ಹೇಳಿದ್ದಾರೆ.
ಅಕ್ರಮ ವಲಸಿಗರ ಖರ್ಚುವೆಚ್ಚಗಳನ್ನು ಅಮೆರಿಕವೇ ನೋಡಿಕೊಳ್ಳುವ ಷರತ್ತಿನೊಂದಿಗೆ ಅವರನ್ನು ಸ್ವೀಕರಿಸಲಾಗಿದೆ ಎಂದು ಅವರು ತಿಳಿಸಿದರು.