×
Ad

ಕೇರಳ ಕಾಂಗ್ರೆಸ್ ನಾಯಕರೊಂದಿಗೆ ಚುನಾವಣಾ ತಂತ್ರದ ಕುರಿತು ಚರ್ಚಿಸಿದ ಪಕ್ಷದ ವರಿಷ್ಠರು

Update: 2025-02-28 21:01 IST
PC : PTI

ಹೊಸದಿಲ್ಲಿ: ಶುಕ್ರವಾರ ಇಂದಿರಾ ಭವನದಲ್ಲಿ ನಡೆದ ಸಭೆಯಲ್ಲಿ ಮುಂದಿನ ವರ್ಷ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಅನುಸರಿಸಬೇಕಾದ ಚುನಾವಣಾ ತಂತ್ರಗಳ ಕುರಿತು ಕೇರಳ ಕಾಂಗ್ರೆಸ್ ನಾಯಕರೊಂದಿಗೆ ಪಕ್ಷದ ವರಿಷ್ಠರು ಗಂಭೀರವಾಗಿ ಚರ್ಚಿಸಿದರು. ಸಭೆಯ ನಂತರ, ಕೇರಳದಲ್ಲಿನ ದೌರ್ಜನ್ಯಕಾರಿ ಹಾಗೂ ಮತೀಯವಾದಿ ಮೈತ್ರಿಕೂಟಗಳನ್ನು ಜನರು ಪರಾಭವಗೊಳಿಸಲಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸಭೆಯಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ವೇಳೆಗೆ ಪಕ್ಷವನ್ನು ಬಲಪಡಿಸಲು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಸಿದ್ಧತೆಗಳ ಕುರಿತೂ ಚರ್ಚಿಸಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, “ಕೇರಳದಲ್ಲಿ ಬದಲಾವಣೆ ಅನಿವಾರ್ಯ. ಕಾಂಗ್ರೆಸ್ ಪಕ್ಷವು ಕೇರಳದಲ್ಲಿ ಅಭಿವೃದ್ಧಿಯ ಮಾನದಂಡ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಮಾದರಿಯನ್ನು ನಿರ್ಮಿಸಿದೆ. ರಾಜ್ಯದಲ್ಲಿ ಯುಡಿಎಫ್ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಲು ಸಾಧ್ಯವಿರುವ ಎಲ್ಲವನ್ನೂ ನಾವು ಮಾಡಲಿದ್ದೇವೆ. ಮುಂದಿನ ವರ್ಷ ಕೇರಳದಲ್ಲಿ ದೌರ್ಜನ್ಯಕಾರಿ ಹಾಗೂ ಮತೀಯವಾದಿ ಮೈತ್ರಿಕೂಟಗಳನ್ನು ಜನರು ಪರಾಭವಗೊಳಿಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಕೇರಳ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸಿದ ನಾವು, ರಾಜ್ಯದಲ್ಲಿ ನಾವು ಅನುಸರಿಸಬೇಕಾದ ರಾಜಕೀಯ ತಂತ್ರಗಾರಿಕೆ ಹಾಗೂ ರಾಜ್ಯದ ಭವಿಷ್ಯದ ಕುರಿತು ಸಮಾಲೋಚನೆ ನಡೆಸಿದೆವು” ಎಂದೂ ಅವರು ಹೇಳಿದ್ದಾರೆ.

ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯೊಂದಿಗೆ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಕೇರಳ ಕಾಂಗ್ರೆಸ್ ಮುಖ್ಯಸ್ಥ ಕೆ.ಸುಧಾಕರನ್, ಕೇರಳ ಕಾಂಗ್ರೆಸ್ ನ ಶಾಸಕಾಂಗ ಪಕ್ಷದ ನಾಯಕ ವಿ.ಡಿ.ಸತೀಶನ್ ಹಾಗೂ ಎಐಸಿಸಿ ಉಸ್ತುವಾರಿ ದೀಪಾ ದಾಸ್ ಮುನ್ಷಿ ಉಪಸ್ಥಿತರಿದ್ದರು.

ಪಕ್ಷದ ಹಿರಿಯ ನಾಯಕರಾದ ರಮೇಶ್ ಚೆನ್ನಿತ್ತಲ, ಪಕ್ಷದ ಮುಖ್ಯ ಸಚೇತಕ ಹಾಗೂ ಸಂಸದ ಕೆ.ಸುರೇಶ್ ಅವರೊಂದಿಗೆ ಸಂಸದ ಶಶಿ ತರೂರ್ ಹಾಗೂ ಕೇರಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಸಂಸದೆ ಜೇಬಿ ಮಾಥರ್ ಕೂಡಾ ಸಮಾಲೋಚನೆಯಲ್ಲಿ ಪಾಲ್ಗೊಂಡರು.

ರಾಜ್ಯದಲ್ಲಿ ಹೂಡಿಕೆ ಸ್ನೇಹಿ ವಾತಾವರಣ ನಿರ್ಮಿಸಿರುವುದಕ್ಕೆ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗವನ್ನು ಶ್ಲಾಘಿಸಿ ತಿರುವನಂತಪುರಂ ಸಂಸದ ಶಶಿ ತರೂರ್ ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಬರೆದಿದ್ದ ಲೇಖನದ ಕುರಿತು ಪಕ್ಷದ ಕೆಲ ನಾಯಕರಿಂದ ಟೀಕೆ ವ್ಯಕ್ತವಾಗಿರುವ ಬೆನ್ನಿಗೇ ಕೇರಳದ ಹಿರಿಯ ನಾಯಕರೊಂದಿಗಿನ ಈ ಸಭೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News