ಬಿಹಾರ | ಚುನಾವಣಾ ಸೋಲಿಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಎಸ್ಐಆರ್ ಕಾರಣ ಎಂದ ಕಾಂಗ್ರೆಸ್
ಕಾಂಗ್ರೆಸ್ ನಾಯಕ ಪವನ್ ಖೇರಾ (Screengrab:X/ANI)
ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಸಾಧಿಸುತ್ತಿದ್ದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ, ಸಂಸದ ಮಾಣಿಕಂ ಟ್ಯಾಗೋರ್, ನೀವು 65 ಲಕ್ಷ ಮತದಾರರನ್ನು ಅದರಲ್ಲಿ ಬಹುಭಾಗ ವಿರೋಧ ಪಕ್ಷದ ಮತದಾರರ ಹೆಸರನ್ನು ಪಟ್ಟಿಯಿಂದ ಡಿಲಿಟ್ ಮಾಡಿದರೆ, ಫಲಿತಾಂಶದ ದಿನ ನೀವು ಏನನ್ನು ನಿರೀಕ್ಷಿಸುತ್ತೀರಿ? ಪಂದ್ಯ ಪ್ರಾರಂಭವಾಗುವ ಮೊದಲೇ ಆಟದ ಮೈದಾನವೇ ವಾಲಿದರೆ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ, ಫಲಿತಾಂಶಗಳಿಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರೇ ಕಾರಣ ಎಂದು ಹೇಳಿದರು. ನಾನು ಹೇಳಿದಂತೆ, ಆರಂಭಿಕ ಬೆಳವಣಿಗೆಯಲ್ಲಿ ಜ್ಞಾನೇಶ್ ಕುಮಾರ್ ಬಿಹಾರದ ಜನರ ವಿರುದ್ಧ ಯಶಸ್ವಿಯಾಗುತ್ತಿರುವಂತೆ ಕಾಣುತ್ತಿವೆ. ಈ ಹೋರಾಟ ಬಿಜೆಪಿ, ಕಾಂಗ್ರೆಸ್, ಆರ್‌ಜೆಡಿ ಮತ್ತು ಜೆಡಿಯು ನಡುವೆ ಅಲ್ಲ. ಇದು ಜ್ಞಾನೇಶ್ ಕುಮಾರ್ ಮತ್ತು ಭಾರತೀಯರ ನಡುವಿನ ನೇರ ಹೋರಾಟವಾಗಿದೆ ಎಂದು ಹೇಳಿದರು.