×
Ad

ಸೆಬಿ ಅಧ್ಯಕ್ಷೆ ರಾಜೀನಾಮೆಗೆ ಆಗ್ರಹಿಸಿ ಆ.22ರಂದು ದೇಶಾದ್ಯಂತ ಕಾಂಗ್ರೆಸ್ ಧರಣಿ

Update: 2024-08-13 21:11 IST

ಮಾಧವಿ ಪುರಿ ಬುಚ್

ಹೊಸದಿಲ್ಲಿ : ಆದಾನಿ ಕಂಪೆನಿಗಳಲ್ಲಿ ಆಕ್ರಮ ಹೂಡಿಕೆಯ ಆರೋಪಗಳಿಗೆ ಸಂಬಂಧಿಸಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರ ರಾಜೀನಾಮೆಗೆ ಹಾಗೂ ಜಂಟಿ ಸಂಸದೀಯ ಸಮಿತಿ ರಚನೆಗೆ ಆಗ್ರಹಿಸಿ ಆಗಸ್ಟ್ 22ರಂದು ದೇಶಾದ್ಯಂತ ಧರಣಿ ನಡೆಸುವುದಾಗಿ ಕಾಂಗ್ರೆಸ್ ಪಕ್ಷವು ಮಂಗಳವಾರ ಘೋಷಿಸಿದೆ.

ಪಕ್ಷದ ಸಂಘಟನಾ ವಿಚಾರಗಳ ಬಗ್ಗೆ ಚರ್ಚಿಸಲು ಹಾಗೂ ಮುಂಬರುವ ವಿಧಾನಸಭಾ ಚುನಾವಣೆಗಳ ಬಗ್ಗೆ ಸಿದ್ಧತೆ ನಡೆಸಲು ಹೊಸದಿಲ್ಲಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪಕ್ಷದ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಘಟಕದ ವರಿಷ್ಠರು ಹಾಗೂ ಎಐಸಿಸಿ ಉಸ್ತುವಾರಿಗಳ ಜೊತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಸಭೆ ನಡೆಸಿದ ಬಳಿಕ ಈ ಘೋಷಣೆಯನ್ನು ಮಾಡಲಾಗಿದೆ.

ಸಭೆಯ ಆನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಆಗಸ್ಟ್ 22ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವ ಕಾಂಗ್ರೆಸ್ ನಿರ್ಧಾರವನ್ನು ಪ್ರಕಟಿಸಿದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಗ್ಗೆ ‘ಎಕ್ಸ್’ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ‘‘ಸೆಬಿ ಹಾಗೂ ಅದಾನಿ ನಡುವಿನ ನಂಟಿನ ಬಗ್ಗೆ ಆಘಾತಕಾರಿ ವಿಷಯಗಳು ಬಹಿರಂಗವಾಗಿವೆ. ಷೇರು ಮಾರುಕಟ್ಟೆಯಲ್ಲಿ ಸಣ್ಣ ಹೂಡಿಕೆದಾರರ ಹಣವನ್ನು ಅಪಾಯಕ್ಕೆ ಸಿಲುಕಿಸಬಾರದು’’ ಎಂದವರು ಬರೆದಿದ್ದಾರೆ.

ಮೋದಿ ಸರಕಾರವು ತಕ್ಷಣೆ ಸೆಬಿ ವರಿಷ್ಠೆಯ ರಾಜೀನಾಮೆಯನ್ನು ಕೇಳಬೇಕು ಹಾಗೂ ಹಗರಣದ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಆದಾನಿ ಗ್ರೂಪ್ ಕಂಪೆನಿಗಳ ಶೇರು ಮೌಲ್ಯಗಳನ್ನು ಕೃತಕವಾಗಿ ಹೆಚ್ಚಿಸಲು ಬಳಕೆಯಾಗುತ್ತಿದ್ದ ಸಾಗರೋತ್ತರ ದೇಶಗಳಲ್ಲಿರುವ ಅಕ್ರಮ ನಿಧಿಗಳಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಹಾಗೂ ಅವರ ಪತಿ ಧವಲ್ ಬುಚ್ ಹೂಡಿಕೆಗಳನ್ನು ಮಾಡಿದ್ದರು ಎಂದು ಅಮೆರಿಕದ ಶಾರ್ಟ್ ಸೆಲ್ಲರ್ ಕಂಪೆನಿ ‘ಹಿಂಡೆನ್ಬರ್ಗ್ ರಿಸರ್ಚ್’ ಆಗಸ್ಟ್ 10ರಂದು ಆಪಾದಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News