×
Ad

ಉಪರಾಷ್ಟ್ರಪತಿ ಚುನಾವಣೆಯಲ್ಲೂ ಮತಗಳ್ಳತನ: ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖ್ಯ ಸಚೇತಕ ಮಾಣಿಕಂ ಟ್ಯಾಗೋರ್ ಆರೋಪ!

Update: 2025-09-11 12:00 IST

Photo | ANI

ಹೊಸದಿಲ್ಲಿ: ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಮತಗಳ್ಳತನ ಮಾಡಿದೆ ಎಂದು ಕಾಂಗ್ರೆಸ್ ಸಂಸದ, ಪಕ್ಷದ ಮುಖ್ಯ ಸಚೇತಕ ಮಾಣಿಕಂ ಟ್ಯಾಗೋರ್ ಆರೋಪಿಸಿದ್ದಾರೆ.

ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನದ ಊಹಾಪೋಹಗಳು ಹರಡಿದೆ. ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ಎರಡೂ ಸದನಗಳಲ್ಲಿರುವ ತನ್ನ ಸಾಮೂಹಿಕ ಸಾಮರ್ಥ್ಯಕ್ಕಿಂತ ಕಡಿಮೆ ಮತ ಪಡೆಯುವಂತಾಗಲು ಇಂಡಿಯಾ ಮೈತ್ರಿಕೂಟದ ಅಂಗಪಕ್ಷಗಳಾದ ಶಿವಸೇನೆ (ಉದ್ಧವ್ ಬಣ) ಹಾಗೂ ಆಪ್‌ ಪಕ್ಷದ ಕೆಲ ಸಂಸದರು ಎನ್‌ಡಿಎ ಅಭ್ಯರ್ಥಿಗೆ ಮತ ಚಲಾಯಿಸಿರುವುದು ಕಾರಣ ಎಂಬ ಅನುಮಾನಗಳು ವ್ಯಕ್ತವಾಗಿರುವ ಬೆನ್ನಿಗೇ, ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಮತಗಳ್ಳತನ ಮಾಡಿದೆ ಎಂದು ಕಾಂಗ್ರೆಸ್ ಸಂಸದ ಹಾಗೂ ಪಕ್ಷದ ಮುಖ್ಯ ಸಚೇತಕ ಮಾಣಿಕಂ ಟ್ಯಾಗೋರ್ ಆರೋಪಿಸಿದ್ದಾರೆ.

ಮತಗಳು ಕಡಿಮೆ ಬೀಳಲು ಕಾರಣವೇನು ಎಂಬ ಕುರಿತು ವಿರೋಧ ಪಕ್ಷಗಳು ಅನೌಪಚಾರಿಕ ತನಿಖೆಗೂ ಚಾಲನೆ ನೀಡಿವೆ. ವಿರೋಧ ಪಕ್ಷಗಳ ಸ್ವಯಂ ಅಂದಾಜಿನ ಪ್ರಕಾರ, ತಮ್ಮ ಬಹುತೇಕ ಸದಸ್ಯರು ಚುನಾವಣೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರೂ, ವಿರೋಧ ಪಕ್ಷಗಳ ಅಭ್ಯರ್ಥಿಗೆ 15 ಮತಗಳ ಕೊರತೆಯುಂಟಾಗಿದೆ. ಒಂದು ಅಂದಾಜಿನ ಪ್ರಕಾರ, ಅಡ್ಡ ಮತದಾನ ಅಥವಾ ಅಮಾನ್ಯ ಮತಗಳನ್ನು ಆರು ಪಕ್ಷಗಳ ಸದಸ್ಯರು ಚಲಾಯಿಸಿದ್ದಾರೆ ಎಂದು ಊಹಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿರೋಧ ಪಕ್ಷಗಳ ಮೈತ್ರಿಕೂಟದ ನಾಯಕರೊಬ್ಬರು, “ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ತಮ್ಮ ಮೈತ್ರಿಕೂಟದ ಸಾಮರ್ಥ್ಯಕ್ಕಿಂತ ಹೆಚ್ಚು ಮತಗಳನ್ನು ಹೇಗೆ ಪಡೆದರು ಎಂದು ನಾವು ಹೇಳಲಾರೆವು. ನಾವು 300 ಮತಗಳನ್ನು ಪಡೆದಿದ್ದೇವೆ ಎಂಬುದು ನಮ್ಮ ವಿಶ್ಲೇಷಣೆಯಾಗಿದೆ. ಆದರೆ, ನಮಗೆ ಶಿವಸೇನೆ (ಉದ್ಧವ್ ಬಣ)ಯ ನಾಲ್ಕು ಸದಸ್ಯರು, ಆಪ್ ಪಕ್ಷದ ನಾಲ್ವರು ಸದಸ್ಯರು, ಎನ್‌ಸಿಪಿ (ಶರದ್ ಪವಾರ್ ಬಣ)ಯ ಇಬ್ಬರು ಸದಸ್ಯರು, ಜಾರ್ಖಂಡ್ ಮುಕ್ತಿ ಮೋರ್ಚಾದ ಒಬ್ಬರು ಅಥವಾ ಇಬ್ಬರು ಸದಸ್ಯರು ಮತಗಳು ಲೆಕ್ಕಕ್ಕೆ ಸಿಕ್ಕಿಲ್ಲ. ಈ ಮತಗಳೇನಾದರೂ ಅಮಾನ್ಯಗೊಂಡಿವೆಯೆ ಅಥವಾ ಎನ್ ಡಿಎ ಪರ ಚಲಾವಣೆಗೊಂಡಿವೆಯೆ ಎಂಬುದನ್ನು ನಾವು ದೃಢವಾಗಿ ಹೇಳಲಾರೆವು. ಇದಲ್ಲದೆ ಕಾಂಗ್ರೆಸ್ ಪಕ್ಷದ ಒಂದು ಮತ ಹಾಗೂ ಸಮಾಜವಾದಿ ಪಕ್ಷದ ಎರಡು ಮತ ಕೂಡಾ ಲೆಕ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.  

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷದ ನಾಯಕ ಮಾಣಿಕಂ ಟ್ಯಾಗೋರ್, “ಶಿವಸೇನೆಯ ಸಂಸದ ಶ್ರೀಕಾಂತ್ ಶಿಂದೆಯೇಕೆ ಇಂಡಿಯಾ ಸಂಸದರಿಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ? ಸಚಿವ ಕಿರಣ್ ರಿಜಿಜು ಏಕೆ ವಿರೋಧ ಪಕ್ಷಗಳ ಆತ್ಮಸಾಕ್ಷಿಯ ಮತದಾನವನ್ನು ಸಂಭ್ರಮಿಸುತ್ತಿದ್ದಾರೆ? ಇದು ನಿಜಕ್ಕೂ ಆತ್ಮಸಾಕ್ಷಿಯದ್ದೆ? ಅಥವಾ ಸಿಬಿಐ/ಈಡಿ ಒತ್ತಡ ಹಾಗೂ ಕುದುರೆ ವ್ಯಾಪಾರವನ್ನು ಆತ್ಮಸಾಕ್ಷಿ ಎಂದು ಸಮರ್ಥಿಸಿಕೊಳ್ಳಾಲಾಗುತ್ತಿದೆಯೆ?” ಎಂದು  ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News