"ಸ್ಪಷ್ಟ ಪ್ರಕರಣಗಳು ಬೆಳಕಿಗೆ ಬರದ ಹೊರತು ನ್ಯಾಯಾಲಯಗಳು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ": ವಕ್ಫ್ ಕಾಯ್ದೆಯ ಕುರಿತು ಸಿಜೆಐ ಗವಾಯಿ
Photo credit: PTI
ಹೊಸದಿಲ್ಲಿ: ಸಂಸತ್ತು ಅಂಗೀಕರಿಸಿದ ಕಾನೂನುಗಳನ್ನು ಸಾಂವಿಧಾನಿಕವೆಂದು ಭಾವಿಸಲಾಗಿದೆ. ಸ್ಪಷ್ಟ ಮತ್ತು ಗಂಭೀರ ಸಮಸ್ಯೆ ಇಲ್ಲದಿದ್ದರೆ ನ್ಯಾಯಾಲಯಗಳು ಅವುಗಳಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಮಂಗಳವಾರ ಹೇಳಿದರು.
ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರ ಪೀಠವು ಕಳೆದ ತಿಂಗಳು ಕಾನೂನಾಗಿ ಜಾರಿಗೆ ಬಂದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿತ್ತು.
ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ಮೂರು ಪ್ರಮುಖ ವಿಷಯಗಳನ್ನು ಗುರುತಿಸಿತ್ತು, ಅವುಗಳಲ್ಲಿ ವಕ್ಫ್ ಬೈ ಯೂಸರ್, ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳಿಗೆ ಮುಸ್ಲಿಮೇತರರ ನಾಮನಿರ್ದೇಶನ ಮತ್ತು ಸರ್ಕಾರಿ ಭೂಮಿಯನ್ನು ವಕ್ಫ್ ಆಸ್ತಿ ಎಂದು ಡಿನೋಟಿಫಿಕೇಷನ್ ಸೇರಿವೆ. ಪ್ರಕರಣ ಇತ್ಯರ್ಥವಾಗುವವರೆಗೆ ಈ ವಿಷಯಗಳ ಬಗ್ಗೆ ಮುಂದುವರಿಯುವುದಿಲ್ಲ ಎಂದು ಕೇಂದ್ರವು ಭರವಸೆ ನೀಡಿತ್ತು.
ಮಂಗಳವಾರದ ವಿಚಾರಣೆಯ ಸಂದರ್ಭದಲ್ಲಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮೂರು ವಿಷಯಗಳ ಕುರಿತು ಕೇಂದ್ರವು ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿದೆ ಎಂದು ಹೇಳಿದರು. "ಅರ್ಜಿದಾರರ ಅರ್ಜಿಯು ಈಗ ಹಲವಾರು ಇತರ ವಿಷಯಗಳಿಗೆ ವಿಸ್ತರಿಸಿವೆ. ಅದನ್ನು ಕೇವಲ ಮೂರು ವಿಷಯಗಳಿಗೆ ಸೀಮಿತಗೊಳಿಸಬೇಕು" ಎಂದು ವಿನಂತಿಸಿದರು.
ಆದರೆ, ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಇದನ್ನು ವಿರೋಧಿಸಿದರು. "ಆಗಿನ ಸಿಜೆಐ (ಸಂಜೀವ್ ಖನ್ನಾ) ಅವರು ಪ್ರಕರಣವನ್ನು ಆಲಿಸಿ, ಯಾವ ಮಧ್ಯಂತರ ಪರಿಹಾರವನ್ನು ನೀಡಬೇಕು ಎಂಬುದನ್ನು ನೋಡೋಣ ಎಂದು ಹೇಳಿದ್ದರು. ಈಗ ನಾವು ಮೂರು ವಿಷಯಗಳಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ತುಂಡು-ತುಂಡು ವಿಚಾರಣೆ ಸಾಧ್ಯವಿಲ್ಲ ", ಎಂದು ಸಿಂಘ್ವಿ ಹೇಳಿದರು.
ಅರ್ಜಿದಾರರ ಪರವಾಗಿ ಹಾಜರಿದ್ದ ಇನ್ನೊಬ್ಬ ವಕೀಲ ಕಪಿಲ್ ಸಿಬಲ್, ವಕ್ಫ್ ಕಾಯ್ದೆಯು ವಕ್ಫ್ ಭೂಮಿಯನ್ನು ನಿಯಂತ್ರಿಸುವ ಉದ್ದೇಶವನ್ನು ಹೊಂದಿದೆ ಎಂದು ವಾದಿಸಿದರು. "ಯಾವುದೇ ಪ್ರಕ್ರಿಯೆಯನ್ನು ಅನುಸರಿಸದೆ ವಕ್ಫ್ ಆಸ್ತಿಯನ್ನು ಕಸಿದುಕೊಳ್ಳುವ ರೀತಿಯಲ್ಲಿ ಕಾನೂನನ್ನು ವಿನ್ಯಾಸಗೊಳಿಸಲಾಗಿದೆ" ಎಂದು ಅವರು ಪ್ರತಿಪಾದಿಸಿದರು.
ಕನಿಷ್ಠ ಐದು ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಪಾಲಿಸುತ್ತಿರುವ ವ್ಯಕ್ತಿ ಮಾತ್ರ ವಕ್ಫ್ ಮಾಡಬಹುದು ಎಂದು ನೂತನ ಕಾನೂನಿನಲ್ಲಿದೆ ಎಂಬುದನ್ನು ಅವರು ಎತ್ತಿ ತೋರಿಸಿದರು.
"ನಾನು ಮರಣಶಯ್ಯೆಯಲ್ಲಿದ್ದೇನೆ. ಆ ಸಂದರ್ಭ ನಾನು ವಕ್ಫ್ ಮಾಡಲು ಬಯಸಿದರೆ, ನಾನು ಮುಸ್ಲಿಂ ಎಂದು ಮೊದಲು ಸಾಬೀತುಪಡಿಸಬೇಕು. ಇದು ಅಸಂವಿಧಾನಿಕ. ವಕ್ಫ್ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಗುರಿಯನ್ನು ಈ ಕಾನೂನು ಹೊಂದಿದೆ ಎಂದು ಸಿಬಲ್ ಪುನರುಚ್ಚರಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಗವಾಯಿ, "ಸಂಸತ್ತು ಅಂಗೀಕರಿಸಿದ ಕಾನೂನುಗಳನ್ನು ಸಾಂವಿಧಾನಿಕವೆಂದು ಭಾವಿಸಲಾಗಿದೆ. ಸ್ಪಷ್ಟ ಮತ್ತು ಗಂಭೀರ ಸಮಸ್ಯೆ ಇಲ್ಲದಿದ್ದರೆ ನ್ಯಾಯಾಲಯಗಳು ಅವುಗಳಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ವಿಶೇಷವಾಗಿ ಪ್ರಸ್ತುತ ಸನ್ನಿವೇಶದಲ್ಲಿ, ನಾವು ಹೆಚ್ಚಿನದನ್ನು ಹೇಳಬೇಕಾಗಿಲ್ಲ", ಎಂದರು.
ಹೊಸ ಕಾನೂನಿನಡಿಯಲ್ಲಿ, ಯಾವುದೇ ಗ್ರಾಮ ಪಂಚಾಯತ್ ಅಥವಾ ಖಾಸಗಿ ವ್ಯಕ್ತಿ ದೂರು ನೀಡಬಹುದು ಮತ್ತು ಆಸ್ತಿಯನ್ನು ವಕ್ಫ್ ಎಂದು ಪರಿಗಣಿಸುವುದನ್ನು ನಿಲ್ಲಿಸಬಹುದು ಎಂದು ಸಿಬಲ್ ಗಮನಸೆಳೆದರು.
"ಸರ್ಕಾರಿ ಅಧಿಕಾರಿಯೊಬ್ಬರು ಅದನ್ನು ನಿರ್ಧರಿಸುತ್ತಾರೆ. ಇಲ್ಲಿ ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ. ಅವರೇ ನ್ಯಾಯಾಧೀಶರಾಗಿರುತ್ತಾರೆ",ಎಂದು ಸಿಬಲ್ ಹೇಳಿದರು.
ವಕ್ಫ್ ರಚನೆಯು ಜಾತ್ಯತೀತ ಪ್ರಕ್ರಿಯೆಯಲ್ಲ, ಬದಲಾಗಿ ಮುಸ್ಲಿಮರು ದೇವರ ಹೆಸರಿನಲ್ಲಿ ಆಸ್ತಿಯನ್ನು ಅರ್ಪಿಸುವುದು ಎಂದು ಕಪಿಲ್ ಸಿಬಲ್ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.