×
Ad

ಗಣಿಗಾರಿಕೆ ವಿರುದ್ಧ ಪ್ರತಿಭಟಿಸಿದ ಆದಿವಾಸಿಗಳಿಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ; ಆರೋಪ

Update: 2023-11-22 20:30 IST

ಸಾಂದರ್ಭಿಕ ಚಿತ್ರ

ಮುಂಬೈ: ಗಣಿಗಾರಿಕೆ ವಿರುದ್ಧ ಪ್ರತಿಭಟನೆ ನಡೆಸಿರುವುದಕ್ಕಾಗಿ ಮಹಾರಾಷ್ಟ್ರದ ಗಡ್ಚಿರೋಳಿ ಜಿಲ್ಲೆಯ ಪೊಲೀಸರು 21 ಮಂದಿಯನ್ನು ಬಂಧಿಸಿದ್ದಾರೆ. ಕಸ್ಟಡಿಯಲ್ಲಿ ಪೊಲೀಸರು ಅವರಿಗೆ ಹೊಡೆದ ಪರಿಣಾಮವಾಗಿ ಅವರಲ್ಲಿ ಹೆಚ್ಚಿನವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ದಾಮ್ಕೊಂಡ್ವಾಹಿ ಬಚಾವೊ ಸಂಘರ್ಷ ಸಮಿತಿ ಎಂಬ ಆದಿವಾಸಿ ಸಂಘಟನೆ ಆರೋಪಿಸಿದೆ.

ಸುರ್ಜಾಗಢ ಬೆಟ್ಟದಲ್ಲಿರುವ ಆರು ಕಬ್ಬಿಣದ ಅದಿರಿನ ಗಣಿಗಳ ವಿರುದ್ಧ ಗಡ್ಚಿರೋಳಿ ಜಿಲ್ಲೆಯ ಎಟಪಳ್ಳಿ ತಾಲೂಕಿನ ತೋಡ್ಗಟ್ಟ ಮತ್ತು ಅದರ ಸುತ್ತಲಿನ 70 ಗ್ರಾಮಗಳ ನಿವಾಸಿಗಳು ಮಾರ್ಚ್ 11ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಆರು ಗಣಿಗಳನ್ನು ಗಣಿಗಾರಿಕೆಗಾಗಿ ಹರಾಜು ಮಾಡಲಾಗಿದೆ. ಐದು ಕಂಪೆನಿಗಳು ಗಣಿಗಾರಿಕೆಯ ಹಕ್ಕುಗಳನ್ನು ಪಡೆದುಕೊಂಡಿವೆ. 4,684 ಹೆಕ್ಟೇರ್ ಸ್ಥಳದಲ್ಲಿ ಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿವೆ.

ಗಣಿಗಾರಿಕೆ ನಡೆಸುತ್ತಿರುವ ಕಂಪೆನಿಗಳೆಂದರೆ ಓಮ್ ಸಾಯಿರಾಮ್ ಸ್ಟೀಲ್ಸ್ ಆ್ಯಂಡ್ ಅಲೋಯ್ಸ್ ಪ್ರೈವೇಟ್ ಲಿಮಿಟೆಡ್, ಜೆಎಸ್ಡಬ್ಲ್ಯು ಸ್ಟೀಲ್ಸ್ ಲಿಮಿಟೆಡ್, ಸನ್ಫ್ಲ್ಯಾಗ್ ಅಯರ್ನ್ ಆ್ಯಂಡ್ ಸ್ಟೀಲ್ ಕಂಪೆನಿ ಲಿಮಿಟೆಡ್, ಯುನಿವರ್ಸಲ್ ಇಂಡಸ್ಟ್ರಿಯಲ್ ಎಕ್ವಿಪ್ಮೆಂಟ್ ಆ್ಯಂಡ್ ಟೆಕ್ನಿಕಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ನ್ಯಾಚುರಲ್ ರಿಸೋರ್ಸಸ್ ಎನರ್ಜಿ ಪ್ರೈವೇಟ್ ಲಿಮಿಟೆಡ್.

ಬೆಟ್ಟಗಳಲ್ಲಿ ಗಣಿಗಾರಿಕೆ ಮಾಡುವುದನ್ನು ಆದಿವಾಸಿ ಗ್ರಾಮಸ್ಥರು ತುಂಬಾ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದ್ದಾರೆ. ಈ ಜಮೀನುಗಳು ತಮಗೆ ಪವಿತ್ರವಾಗಿವೆ ಹಾಗೂ ಗಣಿಗಾರಿಕೆಯು ಇಲ್ಲಿನ ಪರಿಸರ ವ್ಯವಸ್ಥೆ ಮತ್ತು ತಮ್ಮ ಕೃಷಿ ಜೀವನೋಪಾಗಳನ್ನು ಹಾಳುಗೆಡಹುತ್ತವೆ ಎಂದು ಅವರು ಹೇಳಿದ್ದಾರೆ.

ಬಂಧಿತ 21 ಮಂದಿಯ ವಿರುದ್ಧ ಪೊಲೀಸರು ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪವನ್ನು ಹೊರಿಸಿದ್ದಾರೆ ಎಂದು ದಾಮ್ಕೊಂಡ್ವಾಹಿ ಬಚಾವೊ ಸಂಘರ್ಷ ಸಮಿತಿ ಬುಧವಾರ ತಿಳಿಸಿದೆ. ಪೊಲೀಸರು ಬಂಧಿತರ ಮೇಲೆ ಅಮಾನುಷ ದೌರ್ಜನ್ಯ ನಡೆಸಿದ್ದಾರೆ ಎಂದು ಅದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News