×
Ad

ಸುಪ್ರೀಂ ಕೋರ್ಟ್ ಅನ್ನು ಟೀಕಿಸಿದ ಪಕ್ಷದ ಸಂಸದರಿಂದ ಅಂತರ ಕಾಯ್ದುಕೊಂಡ ಬಿಜೆಪಿ: ಡ್ಯಾಮೇಜ್ ಕಂಟ್ರೋಲ್ ಎಂದ ಕಾಂಗ್ರೆಸ್

Update: 2025-04-20 13:31 IST

ಜೈರಾಮ್ ರಮೇಶ್ (Photo: PTI)

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಅನ್ನು ಟೀಕಿಸಿದ್ದ ಪಕ್ಷದ ಸಂಸದರಾದ ನಿಶಿಕಾಂತ್ ದುಬೆ ಹಾಗೂ ದಿನೇಶ್ ಶರ್ಮರಿಂದ ಅಂತರ ಕಾಯ್ದುಕೊಂಡಿರುವ ಬಿಜೆಪಿ ನಡೆಯು ಡ್ಯಾಮೇಜ್ ಕಂಟ್ರೋಲ್ ಆಗಿದೆ ಎಂದು ರವಿವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, "ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಪಕ್ಷದ ಇಬ್ಬರು ಸಂಸದರು ನೀಡಿರುವ ದೌರ್ಜನ್ಯಕಾರಿ ಹೇಳಿಕೆಗಳಿಂದ ಬಿಜೆಪಿ ಅಂತರ ಕಾಯ್ದುಕೊಂಡಿರುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂದು ಟೀಕಿಸಿದ್ದಾರೆ.

"ದ್ವೇಷ ಭಾಷಣದ ವಿಷಯಕ್ಕೆ ಬಂದಾಗ, ಈ ಇಬ್ಬರು ಸಂಸದರು ಪದೇ ಪದೇ ತಪ್ಪುಗಳನ್ನು ಪುನರಾವರ್ತಿಸುತ್ತಿದ್ದು, ಇವರಿಬ್ಬರನ್ನು ಸಮುದಾಯಗಳು, ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ದಾಳಿ ನಡೆಸಲು ಜಿ2 ಬಳಸಿಕೊಂಡಿದೆ. ಬಿಜೆಪಿಯ ಪದತ್ಯಾಗ ಮಾಡಲಿರುವ ಅಧ್ಯಕ್ಷರು ನೀಡಿರುವ ಸ್ಪಷ್ಟನೆಯು ಡ್ಯಾಮೇಜ್ ಕಂಟ್ರೋಲ್ ಅಲ್ಲದೆ ಮತ್ತೇನಲ್ಲ" ಎಂದು ಅವರು ವ್ಯಂಗ್ಯವಾಡಿದ್ದಾರೆ.

"ಇದು ಯಾರನ್ನೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಇದು ಎಂಟೈರ್ ಪೊಲಿಟಿಕಲ್ ಸೈನ್ಸ್ ತನ್ನನ್ನು ತಾನು ಸಂಪೂರ್ಣ ರಾಜಕೀಯ ಬೂಟಾಟಿಕೆ ಎಂದು ಪ್ರತಿಫಲಿಸಿಕೊಳ್ಳುತ್ತಿರುವುದಾಗಿದೆ" ಎಂದೂ ಅವರು ಚಾಟಿ ಬೀಸಿದ್ದಾರೆ.

"ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ನೇಮಕಗೊಂಡಿರುವ ತಮ್ಮದೇ ಪಕ್ಷದ ವಿಶಿಷ್ಟ ವ್ಯಕ್ತಿಯೊಬ್ಬರು ನ್ಯಾಯಾಂಗದ ಮೇಲೆ ನಡೆಸುತ್ತಿರುವ ನಿರಂತರ ದಾಳಿಗೆ ಬಿಜೆಪಿಯ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸುತ್ತಿರುವ ಅಧ್ಯಕ್ಷರ ಮೌನವು ಸಮಾನವಾಗಿದೆ. ಆ ಹೇಳಿಕೆಗಳನ್ನು ಬಿಜೆಪಿಯೇನಾದರೂ ಸಮರ್ಥಿಸಿಕೊಂಡಿದ್ದರೆ, ಅವರೇನು ಮಾಡಬೇಕಿತ್ತು?" ಎಂದೂ ಅವರು ಛೇಡಿಸಿದ್ದಾರೆ.

"ಒಂದು ವೇಳೆ, ಭಾರತದ ಸಂವಿಧಾನದ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ನಿರಂತರವಾಗಿ ಮುಂದುವರಿದಿರುವ ಪ್ರಧಾನಿ ನರೇಂದ್ರ ಮೋದಿಯ ಮೌನವು ಅಂತಹ ದಾಳಿಕೋರರಿಗೆ ನೀಡುತ್ತಿರುವ ಚಾಣಾಕ್ಷ ಬೆಂಬಲವಲ್ಲದಿದ್ದರೆ, ಈ ಇಬ್ಬರು ಸಂಸದರ ವಿರುದ್ಧ ಯಾವುದೇ ಕ್ರಮವನ್ನು ಏಕೆ ಜರುಗಿಸಿಲ್ಲ? ಈ ಇಬ್ಬರು ಸಂಸದರಿಗೆ ನಡ್ಡಾ ಅವರೇನಾದರೂ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆಯೆ?" ಎಂದೂ ಅವರು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ, ಶನಿವಾರ ಸುಪ್ರೀಂ ಕೋರ್ಟ್ ವಿರುದ್ಧ ವಾಗ್ದಾಳಿ ನಡೆಸಿದ್ದ ವಾಚಾಳಿ ಸಂಸದರೆಂದೇ ಕುಖ್ಯಾತರಾಗಿರುವ ಬಿಜೆಪಿಯ ಸಂಸದ ನಿಶಿಕಾಂತ್ ದುಬೆ, "ಒಂದು ವೇಳೆ ಸುಪ್ರೀಂ ಕೋರ್ಟ್ ಕಾನೂನುಗಳನ್ನು ರಚಿಸುವುದಾದರೆ, ಸಂಸತ್ತು ಹಾಗೂ ವಿಧಾನಸಭೆಗಳನ್ನು ಮುಚ್ಚಲೇಬೇಕು" ಎಂದು ಕಿಡಿ ಕಾರಿದ್ದರು. ಮತ್ತೊಂದೆಡೆ, ಉತ್ತರ ಪ್ರದೇಶದ ಮಾಜಿ ಉಪ ಮುಖ್ಯಮಂತ್ರಿಯೂ ಆದ ಮತ್ತೊಬ್ಬ ಬಿಜೆಪಿ ಸಂಸದ ದಿನೇಶ್ ಶರ್ಮ, ಯಾರೂ ಕೂಡಾ ಸಂಸತ್ತಿಗಾಗಲಿ ಅಥವಾ ರಾಷ್ಟ್ರಪತಿಗಳಿಗಾಗಲಿ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು.

ಈ ಇಬ್ಬರು ಪಕ್ಷದ ಸಂಸದರ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ‌.ಪಿ.ನಡ್ಡಾ ಹೇಳುವ ಮೂಲಕ, ಬಿಜೆಪಿಯು ಅವರ ವಿವಾದಾತ್ಮಕ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News