ವ್ಯಕ್ತಿಯೋರ್ವನ ಆತ್ಮಹತ್ಯೆ ಪ್ರಕರಣಕ್ಕೆ ತಿರುವು; ತಂದೆಯನ್ನು ಅಮಾನುಷವಾಗಿ ಥಳಿಸಿದ್ದ ಪುತ್ರಿಯ ವಿಡಿಯೋ ವೈರಲ್
Photo credit: NDTV
ಭೋಪಾಲ್: ಇತ್ತೀಚೆಗಷ್ಟೆ ಮಧ್ಯಪ್ರದೇಶದ ಮೊರೇನಾದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರ ಸಾವಿನ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಅವರು ಸಾಯುವುದಕ್ಕೂ ಮುನ್ನ, ಆತನ ಪತ್ನಿ ಅವರನ್ನು ಬಲವಂತವಾಗಿ ಹಿಡಿದುಕೊಂಡಿರುವುದು ಹಾಗೂ ಅವರ ಪುತ್ರಿಯರು ಕೋಲಿನಿಂದ ತಂದೆಗೆ ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮೃತ ಹರೇಂದ್ರ ಮೌರ್ಯರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾರೊ ಅಥವಾ ಹತ್ಯೆಗೈಯ್ಯಲಾಗಿದೆಯೊ ಎಂಬುದು ಮರಣೋತ್ತರ ಪರೀಕ್ಷಾ ವರದಿ ಬಂದ ನಂತರವಷ್ಟೆ ದೃಢಪಡಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ ಹರೇಂದ್ರ ಮೌರ್ಯರಿಗೆ ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನಿದ್ದಾನೆ. ನೆರೆಹೊರೆಯವರು ಹಾಗೂ ಸಂಬಂಧಿಕರ ಪ್ರಕಾರ, ಆತ ತನ್ನ ಪತ್ನಿಯೊಂದಿಗೆ ಪದೇ ಪದೇ ಜಗಳವಾಡುತ್ತಿದ್ದ ಎಂದು ಹೇಳಲಾಗಿದೆ.
ಮಾರ್ಚ್ 1ರಂದಷ್ಟೆ ಅವರ ಇಬ್ಬರು ಪುತ್ರಿಯರ ವಿವಾಹ ನೆರವೇರಿತ್ತು. ವಿವಾಹದ ನಂತರ, ತಾನು ಪ್ರತ್ಯೇಕವಾಗಿ ವಾಸಿಸುವ ಬಯಕೆಯನ್ನು ವ್ಯಕ್ತಪಡಿಸಿದ ಹರೇಂದ್ರ ಮೌರ್ಯರ ಪತ್ನಿ, ತನ್ನ ತಂದೆಯ ಮನೆಗೆ ತೆರಳುವುದಾಗಿ ತಿಳಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಹರೇಂದ್ರ ಮೌರ್ಯ, ಕೋಣೆಗೆ ತೆರಳಿ ಚಿಲಕ ಹಾಕಿಕೊಂಡಿದ್ದಾರೆ. ಎಷ್ಟು ಹೊತ್ತಾದರೂ ಹರೇಂದ್ರ ಮೌರ್ಯ ಕೋಣೆಯಿಂದ ಹೊರಬಾರದೆ ಇರುವುದನ್ನು ಕಂಡು ಗಾಬರಿಯಾಗಿರುವ ಕುಟುಂಬದ ಸದಸ್ಯರು ಬಾಗಿಲಿನಿಂದ ಇಣುಕಿ ನೋಡಿದಾಗ, ಅವರು ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ತಕ್ಷಣವೇ ಹರೇಂದ್ರ ಮೌರ್ಯರನ್ನು ಆಸ್ಪತ್ರೆಗೆ ಸಾಗಿಸಿದರೂ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಈ ಸಾವಿನ ಬೆನ್ನಿಗೇ, ಮನೆಯಲ್ಲಿ ನಿತ್ಯ ನಡೆಯುತ್ತಿದ್ದ ಜಗಳದಿಂದ ಬೇಸತ್ತು ಹರೇಂದ್ರ ಮೌರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನೆರೆಹೊರೆಯವರು ಆರೋಪಿಸಿದ್ದಾರೆ. ಆದರೆ, ಹರೇಂದ್ರ ಮೌರ್ಯರನ್ನು ಅವರ ತಂದೆ ಹಾಗೂ ಸಹೋದರ ಹತ್ಯೆಗೈದಿದ್ದಾರೆ ಎಂದು ಅವರ ಪತ್ನಿಯ ಪೋಷಕರು ಆರೋಪಿಸಿದ್ದಾರೆ.
ಈ ಆರೋಪಗಳ ಬೆನ್ನಿಗೇ, ಹರೇಂದ್ರ ಮೌರ್ಯರ ಪುತ್ರಿ ಅವರನ್ನು ಥಳಿಸುತ್ತಿರುವ ಆಘಾತಕಾರಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆ ವಿಡಿಯೊದಲ್ಲಿ ಹರೇಂದ್ರ ಮೌರ್ಯರ ಪತ್ನಿ ಅವರ ಕಾಲನ್ನು ಹಿಡಿದುಕೊಂಡಿದ್ದು, ಅವರ ಪುತ್ರಿ ಅವರನ್ನು ಕೋಲಿನಿಂದ ಥಳಿಸುತ್ತಿರುವುದು ಸೆರೆಯಾಗಿದೆ. ಈ ವೇಳೆ ಹರೇಂದ್ರ ಮೌರ್ಯ ನೋವಿನಿಂದ ಚೀರಾಡುತ್ತಿರುವುದೂ ಆ ವಿಡಿಯೊದಲ್ಲಿ ದಾಖಲಾಗಿದೆ. ಒಂದು ಹಂತದಲ್ಲಿ ಹರೇಂದ್ರ ಮೌರ್ಯರ ಕಿರಿಯ ಪುತ್ರ ತನ್ನ ಅಕ್ಕನನ್ನು ತಡೆಯಲು ಯತ್ನಿಸಿದರೂ, ಆತನನ್ನೂ ಥಳಿಸುವುದಾಗಿ ಆಕೆ ಬೆದರಿಕೆ ಒಡ್ಡಿದ್ದಾಳೆ. ಹರೇಂದ್ರ ಮೌರ್ಯ ಥಳಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಅವರ ಪತ್ನಿ ಅವರನ್ನು ಮತ್ತೆ ಬಲವಂತವಾಗಿ ಒತ್ತಿ ಹಿಡಿದಿದ್ದು, ಅವರನ್ನು ಥಳಿಸುವುದನ್ನು ಪುತ್ರಿ ಮುಂದುವರಿಸಿರುವುದೂ ಆ ವಿಡಿಯೊದಲ್ಲಿ ಸೆರೆಯಾಗಿದೆ.
ಫೆಬ್ರವರಿ 1ರ ದಿನಾಂಕ ಹೊಂದಿರುವ ಈ ವೈರಲ್ ವಿಡಿಯೊ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿ ದೀಪಾಲಿ ಚಂದೋರಿಯ, “ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗ್ವಾಲಿಯರ್ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷಾ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
“ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ಎಂಬ ಮಾಹಿತಿ ನಮಗೆ ದೊರೆಯಿತು. ಇದಕ್ಕೆ ಕೌಟುಂಬಿಕ ಕಲಹ ಕಾರಣ ಎಂದು ಪ್ರಾಥಮಿಕ ತನಿಖೆಯ ವೇಳೆ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಈ ಕುರಿತು ಬೆಳಕಿಗೆ ಬರುವ ಎಲ್ಲ ಸಂಗತಿಗಳ ಕುರಿತು ನಾವು ತನಿಖೆ ನಡೆಸಲಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ನಾವು ವಿಡಿಯೊವನ್ನು ಪರಿಗಣನೆಗೆ ತೆಗೆದುಕೊಂಡಿದ್ದು, ಸಾವಿಗೆ ನಿಖರ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷಾ ವರದಿಯಿಂದ ದೃಢಪಡಲಿದೆ ಎಂದೂ ಅವರು ಹೇಳಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.