ಕರ್ನಾಟಕ ಸರಕಾರದ 15 ಲಕ್ಷ ರೂ.ಪರಿಹಾರ ನಿರಾಕರಿಸಿದ ಮೃತ ಅಜೀಶ್ ಕುಟುಂಬ
Photo: mediaoneonline.com
ವಯನಾಡ್ : ಕರ್ನಾಟಕದ ಬೇಲೂರಿನಿಂದ ಕೇರಳವನ್ನು ಪ್ರವೇಶಿಸಿದ್ದ ಮಖ್ನಾ ಕಾಡಾನೆಯು ತುಳಿದು ಸಾವನ್ನಪ್ಪಿದ್ದ ವಯನಾಡಿನ ಪದಮಲ ನಿವಾಸಿ ಅಜೀಶ್ ಕುಟುಂಬವು ಕರ್ನಾಟಕ ಸರಕಾರವು ಘೋಷಿಸಿರುವ 15 ಲಕ್ಷ ರೂ.ಗಳ ಪರಿಹಾರವನ್ನು ನಿರಾಕರಿಸಿದೆ.
ಕರ್ನಾಟಕ ವಿಧಾನಸಭೆಯಲ್ಲಿ ಈ ಪರಿಹಾರ ಕುರಿತು ಬಿಜೆಪಿ ಗದ್ದಲವೆಬ್ಬಿಸಿದ ಬಳಿಕ ಅಜೀಶ್ ಕುಟುಂಬವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಬಿಜೆಪಿ ನಡವಳಿಕೆಯ ಬಗ್ಗೆ ವಿಷಾದವನ್ನು ವ್ಯಕ್ತಪಡಿಸಿರುವ ಅಜೀಶ್ ಕುಟುಂಬ, ಅದನ್ನು ಅಮಾನವೀಯ ಎಂದು ಬಣ್ಣಿಸಿದೆ.
ಫೆ.10ರಂದು ಬೇಲೂರ ಮಖ್ನಾ ಅಜೀಶ್‌ರನ್ನು ತುಳಿದು ಕೊಂದು ಹಾಕಿತ್ತು. ಆನೆಯು ತನ್ನ ಅರಣ್ಯ ಇಲಾಖೆಯು ಅಳವಡಿಸಿದ್ದ ರೇಡಿಯೊ ಕಾಲರ್ ಹೊಂದಿದ್ದರಿಂದ ಮೃತರ ಕುಟುಂಬಕ್ಕೆ 15 ಲಕ್ಷ ರೂ.ಗಳ ಪರಿಹಾರವನ್ನು ನೀಡಲು ಕರ್ನಾಟಕ ಸರಕಾರವು ನಿರ್ಧರಿಸಿತ್ತು.
ಅಜೀಶ್ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ ಬಳಿಕ ದೂರವಾಣಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತನಾಡಿದ್ದ ವಯನಾಡ್ ಸಂಸದ ರಾಹುಲ್ ಗಾಂಧಿಯವರು ಆರ್ಥಿಕ ನೆರವನ್ನು ಪ್ರಕಟಿಸಿದ್ದರು.
ಹಣಕಾಸು ಮುಗ್ಗಟ್ಟಿನ ನಡುವೆ ಅಜೀಶ್ ಕುಟುಂಬಕ್ಕೆ ಪರಿಹಾರವನ್ನು ವಿರೋಧಿಸಿ ಬಿಜೆಪಿ ಕರ್ನಾಟಕ ವಿಧಾನಸಭೆಯಲ್ಲಿ ಭಾರೀ ಗದ್ದಲವನ್ನೆಬ್ಬಿಸಿತ್ತು.
ರಾಹುಲ್ ಗಾಂಧಿ ಮತ್ತು ಕರ್ನಾಟಕ ಸರಕಾರಕ್ಕೆ ತಾವು ಕೃತಜ್ಞರಾಗಿದ್ದೇವೆ, ಆದರೆ ವಿವಾದದಿಂದಾಗಿ ಪರಿಹಾರವನ್ನು ನಿರಾಕರಿಸುತ್ತಿದ್ದೇವೆ ಎಂದು ಅಜೀಶ್ ಕುಟುಂಬವು ತಿಳಿಸಿದೆ.