ದಿಲ್ಲಿ | ನಾಲ್ಕು ಅಂತಸ್ತಿನ ಕಟ್ಟಡ ಕುಸಿತ: ಇಬ್ಬರು ಮೃತ್ಯು; 10 ಮಂದಿಯ ರಕ್ಷಣೆ
PC : PTI
ಹೊಸದಿಲ್ಲಿ: ವಾಯುವ್ಯ ದಿಲ್ಲಿಯ ವೆಲ್‌ಕಮ್ ಪ್ರದೇಶದ ಸೀಲಂಪುರ್‌ನ ಜನತಾ ಮಜ್ದೂರ್ ಕಾಲನಿಯಲ್ಲಿ ಶುಕ್ರವಾರ ಮುಂಜಾನೆ ಸುಮಾರು 7 ಗಂಟೆಗೆ ಸಂಭವಿಸಿದ್ದ ನಾಲ್ಕು ಅಂತಸ್ತಿನ ಕಟ್ಟಡ ಕುಸಿತದಲ್ಲಿ ಇಬ್ಬರು ಮೃತಪಟ್ಟಿದ್ದು, ಕನಿಷ್ಠ 10 ಮಂದಿಯನ್ನು ರಕ್ಷಿಸಲಾಗಿದೆ.
ಕಟ್ಟಡವು ದಿಢೀರನೆ ಕುಸಿದಿದ್ದರಿಂದ, ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿಕೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ರಾಜ್ಯ ಸಚಿವ ಕಪಿಲ್ ಮಿಶ್ರಾ ಕೂಡಾ ಧಾವಿಸಿದ್ದಾರೆ.
ಪೊಲೀಸ್ ಇಲಾಖೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಘಟನೆಯಲ್ಲಿ ರಕ್ಷಿಸಲಾಗಿರುವ 10 ಮಂದಿಯನ್ನು ಜೆಪಿಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಓರ್ವ ಗಾಯಾಳುವನ್ನು ಜಿಟಿಬಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಹಲವರು ಇನ್ನೂ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮೂಲಗಳ ಪ್ರಕಾರ, ಕುಸಿದು ಬಿದ್ದಿರುವ ಕಟ್ಟಡದಲ್ಲಿ ಅಂದಾಜು 12 ಮಂದಿ ವಾಸಿಸುತ್ತಿದ್ದರು. ಈ ಪೈಕಿ ಮೂವರು ಮಕ್ಕಳು ಹಾಗೂ ಮೂವರು ಮಹಿಳೆಯರಿದ್ದರು ಎನ್ನಲಾಗಿದೆ.