×
Ad

ಸಚಿವ ಕಪಿಲ್ ಮಿಶ್ರಾ, ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ ಪಂಜಾಬ್‌ನ ಮೂವರು ಉನ್ನತ ಪೊಲೀಸ್‌ ಅಧಿಕಾರಿಗಳಿಗೆ ದಿಲ್ಲಿ ವಿಧಾನಸಭೆಯಿಂದ ನೋಟಿಸ್

Update: 2026-01-10 16:00 IST

ಕಪಿಲ್ ಮಿಶ್ರಾ (Photo: PTI)

ಹೊಸದಿಲ್ಲಿ: ದಿಲ್ಲಿ ವಿಧಾನಸಭೆಯ ವಿಡಿಯೊ ತುಣುಕನ್ನು ಬಳಸಿಕೊಂಡು ದಿಲ್ಲಿ ಕಾನೂನು ಸಚಿವ ಕಪಿಲ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಿರುವುದರ ಕುರಿತು ಇನ್ನು 48 ಗಂಟೆಗಳೊಳಗಾಗಿ ಪ್ರತಿಕ್ರಿಯೆಗಳನ್ನು ನೀಡಬೇಕು ಎಂದು ಸೂಚಿಸಿ ಶನಿವಾರ ದಿಲ್ಲಿ ವಿಧಾನಸಭೆಯ ಸ್ಪೀಕರ್ ವಿಜೇಂದರ್ ಗುಪ್ತ ಅವರು ಪಂಜಾಬ್ ನ ಮೂವರು ಉನ್ನತ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.

“ದಿಲ್ಲಿ ವಿಧಾನಸಭೆಯ ಹಕ್ಕುಚ್ಯುತಿ ಮಾಡಿರುವ ಆರೋಪದ ಮೇಲೆ ಪಂಜಾಬ್ ನ ಪೊಲೀಸ್ ಮಹಾ ನಿರ್ದೇಶಕ, ವಿಶೇಷ ಪೊಲೀಸ್ ಮಹಾ ನಿರ್ದೇಶಕ (ಸೈಬರ್ ಅಪರಾಧ) ಹಾಗೂ ಜಲಂಧರ್ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲಾಗಿದೆ” ಎಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಜೇಂದರ್ ಗುಪ್ತ ತಿಳಿಸಿದ್ದಾರೆ.

ವಿಡಿಯೊ ಚಿತ್ರೀಕರಣದ ದೃಶ್ಯಗಳು ದಿಲ್ಲಿ ವಿಧಾನಸಭೆಯ ಸ್ವತ್ತಾಗಿದ್ದು, ಆ ವಿಡಿಯೊ ತುಣುಕುಗಳನ್ನು ಆಧರಿಸಿ ಪಂಜಾಬ್ ಪೊಲೀಸರು ಎಫ್ಐಆರ್ ದಾಖಲಿಸಿರುವುದು ದುರದೃಷ್ಟಕರವಾಗಿದೆ ಹಾಗೂ ಸದನದ ಘನತೆಗೆ ಧಕ್ಕೆ ತಂದಿದೆ ಎಂದು ಅವರು ಆರೋಪಿಸಿದ್ದಾರೆ.

ಪಂಜಾಬ್ ಪೊಲೀಸರ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದ ನಂತರ, ಅವರ ವಿರುದ್ಧ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಒಂಬತ್ತನೆ ಸಿಖ್ ಗುರುವಿನ ಹುತಾತ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗುರು ತೇಜ್ ಬಹದ್ದೂರ್ ಅವರನ್ನು ವಿರೋಧ ಪಕ್ಷಗಳ ನಾಯಕಿ ಅತಿಶಿ ಅವಮಾನಿಸಿದ್ದರು ಎಂದು ಮಂಗಳವಾರ ನಡೆದ ದಿಲ್ಲಿ ವಿಧಾನಸಭಾ ಚರ್ಚೆಯ ವೇಳೆ ದಿಲ್ಲಿ ಕಾನೂನು ಸಚಿವ ಕಪಿಲ್ ಮಿಶ್ರಾ ಹಾಗೂ ಇನ್ನಿತರ ಬಿಜೆಪಿ ಶಾಸಕರು ಆರೋಪಿಸಿದ್ದರು.

ಆದರೆ, ಅತಿಶಿ ಅವರ ಸಂಕಲಿಸಿದ ಹಾಗೂ ತಿರುಚಿದ ವಿಡಿಯೊವನ್ನು ಕಪಿಲ್ ಮಿಶ್ರಾ ಹಾಗೂ ಮತ್ತಿತರರು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ಆರೋಪಿಸಿ ಜಲಂಧರ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News