ಬಾಂಬ್ ಬೆದರಿಕೆ ಹಿನ್ನೆಲೆ | ಬರ್ಮಿಂಗ್ ಹ್ಯಾಮ್-ದಿಲ್ಲಿ ವಿಮಾನ ರಿಯಾದ್ ಗೆ ಮಾರ್ಗ ಬದಲಾವಣೆ: ಏರ್ ಇಂಡಿಯಾ
ಏರ್ ಇಂಡಿಯಾ | PC : PTI
ಹೊಸದಿಲ್ಲಿ: ಬಾಂಬ್ ಬೆದರಿಕೆ ಸ್ವೀಕರಿಸಿದ ಹಿನ್ನೆಲೆಯಲ್ಲಿ, ಶನಿವಾರ ಬರ್ಮಿಂಗ್ ಹ್ಯಾಮ್ ನಿಂದ ದಿಲ್ಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಸೌದಿ ಅರೇಬಿಯಾ ರಾಜಧಾನಿ ರಿಯಾದ್ ಗೆ ಮಾರ್ಗ ಬದಲಾವಣೆ ಮಾಡಿ, ಸುರಕ್ಷಿತವಾಗಿ ಭೂಸ್ಪರ್ಶ ಮಾಡಲಾಯಿತು ಎಂದು ಏರ್ ಇಂಡಿಯಾ ತಿಳಿಸಿದೆ.
ಈ ಕುರಿತು ರವಿವಾರ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ಟಾಟಾ ಸಮೂಹ ಸಂಸ್ಥೆ ಒಡೆತನದ ಏರ್ ಇಂಡಿಯಾ, ಪ್ರಯಾಣಿಕರು ತಮ್ಮ ಸ್ಥಳಗಳಿಗೆ ತೆರಳಲು ರಿಯಾದ್ ನಿಂದ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದೆ. ಇದಕ್ಕೂ ಮುನ್ನ, ಕಾರ್ಯಾಚರಣೆ ಸ್ಥಿರತೆಯನ್ನು ಖಾತರಿಪಡಿಸಲು ಏರ್ ಇಂಡಿಯಾ ಸಂಸ್ಥೆ ತನ್ನ ಸೇವೆಗಳನ್ನು ತಾತ್ಕಾಲಿಕವಾಗಿ ಕಡಿತಗೊಳಿಸಿತ್ತು.
“ಜೂನ್ 21ರಂದು ಬರ್ಮಿಂಗ್ ಹ್ಯಾಮ್ ನಿಂದ ದಿಲ್ಲಿಗೆ ಆಗಮಿಸುತ್ತಿದ್ದ ವಿಮಾನ ಸಂಖ್ಯೆ ಎಐ114ಗೆ ಬಾಂಬ್ ಬೆದರಿಕೆ ಬಂದಿದ್ದರಿಂದ, ವಿಮಾನದ ಮಾರ್ಗವನ್ನು ರಿಯಾದ್ ಗೆ ಬದಲಿಸಿ, ಸುರಕ್ಷಿತವಾಗಿ ಭೂಸ್ಪರ್ಶ ಮಾಡಲಾಯಿತು. ನಂತರ, ವಿಮಾನದಿಂದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿ ವಿಮಾನದ ಸಂಪೂರ್ಣ ಭದ್ರತಾ ತಪಾಸಣೆ ಕೈಗೊಳ್ಳಲಾಯಿತು. ಪ್ರಯಾಣಿಕರಿಗೆ ಹೋಟೆಲ್ ವಾಸ್ತವ್ಯವನ್ನು ಒದಗಿಸಲಾಯಿತು” ಎಂದು ಈ ಪ್ರಕಟನೆಯಲ್ಲಿ ಹೇಳಲಾಗಿದೆ.
ಜೂನ್ 12ರಂದು ಅಹಮದಾಬಾದ್ ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದ ನಂತರ, ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯು ಸ್ವಯಂಪ್ರೇರಿತವಾಗಿ ಸುಧಾರಿತ ಪೂರ್ವ ವಿಮಾನ ಹಾರಾಟ ಸುರಕ್ಷತಾ ತಪಾಸಣೆಗಳನ್ನು ನಡೆಸುತ್ತಿದೆ. ಕಾರ್ಯಾಚರಣೆ ಸ್ಥಿರತೆಯನ್ನು ಸುಧಾರಿಸಲು ತಾತ್ಕಾಲಿಕವಾಗಿ ವೈಮಾನಿಕ ಸೇವೆಗಳನ್ನು ಕಡಿತಗೊಳಿಸಿದೆ.