×
Ad

ದಿಲ್ಲಿ ಸ್ಫೋಟ | ಮೂವರು ವೈದ್ಯರು, ಇಬ್ಬರು ರಸಗೊಬ್ಬರ ವ್ಯಾಪಾರಿಗಳ ಬಂಧನ

Update: 2025-11-15 20:29 IST

Photo Credit : PTI 

ಚಂಡಿಗಡ.ನ.15: ದಿಲ್ಲಿಯ ಕೆಂಪುಕೋಟೆ ಸಮೀಪ ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅಲ್-ಫಲಾಹ್ ವಿವಿಯಲ್ಲಿ ಕೆಲಸ ಮಾಡಿದ್ದ ಸರ್ಜನ್ ಓರ್ವರನ್ನು ಪಂಜಾಬಿನ ಪಠಾಣಕೋಟ್‌ ನಲ್ಲಿ ಬಂಧಿಸಲಾಗಿದೆ. ಇದರ ಜೊತೆ ನುಹ್‌ ನಲ್ಲಿ ಓರ್ವ ವೈದ್ಯಮತ್ತು ಹರ್ಯಾಣದ ಸೊಹ್ನಾದಲ್ಲಿ ಇಬ್ಬರು ರಸಗೊಬ್ಬರ ಮತ್ತು ಬೀಜಗಳ ವ್ಯಾಪಾರಿಗಳನ್ನೂ ಬಂಧಿಸಲಾಗಿದೆ.

ಹಲವು ಕೇಂದ್ರ ಮತ್ತು ರಾಜ್ಯ ಭದ್ರತಾ ಏಜೆನ್ಸಿಗಳು ಫರೀದಾಬಾದ್‌ನ ಅಲ್-ಫಲಾಹ್ ವಿವಿಯ ಮೇಲೆ ನಿಗಾ ಮುಂದುವರಿಸಿದ್ದು, ಕಂದಾಯ ಅಧಿಕಾರಿಗಳು ವಿವಿಯ ಭೂದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಈ ನಡುವೆ ರಾಷ್ಟ್ರೀಯ ವೈದ್ಯಕೀಯ ಆಯೋಗವು ನ.10ರಂದು ಸಂಭವಿಸಿದ್ದ ಸ್ಫೋಟದ ಹಿಂದಿನ ಭಯೋತ್ಪಾದಕ ಜಾಲದಲ್ಲಿ ಭಾಗಿಯಾಗಿದ್ದ ನಾಲ್ವರು ವೈದ್ಯರ ನೋಂದಣಿಗಳನ್ನು ರದ್ದುಗೊಳಿಸಿದೆ.

ಪಠಾಣಕೋಟ್‌ ನ ವೈಟ್ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಡಾ.ರಯೀಸ್ ಅಹ್ಮದ್ ಭಟ್(45) ರನ್ನು ಬಂಧಿಸಿರುವ ಕೇಂದ್ರ ಏಜೆನ್ಸಿಗಳು ಅವರ ವಿಚಾರಣೆ ನಡೆಸುತ್ತಿವೆ. ಭಟ್ ದಿಲ್ಲಿ ಸ್ಫೋಟದ ಮಾಸ್ಟರ್ ಮೈಂಡ್ ಡಾ.ಉಮರ್ ನಬಿ ಜೊತೆ ಸಂಪರ್ಕದಲ್ಲಿದ್ದರು ಎನ್ನುವುದನ್ನು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. 2020ರಿಂದ 2021ರವರೆಗೆ ಅಲ್-ಫಲಾಹ್ ವಿವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಟ್ ವಿವಿಯ ಸಿಬ್ಬಂದಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದರು ಎನ್ನುವುದನ್ನೂ ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಭಟ್ ಜೈಷೆ ಮುಹಮ್ಮದ್ ಮತ್ತು ಅನ್ಸಾರ್ ಗಝ್ವತುಲ್ ಹಿಂದ್ ಬೆಂಬಲಿತ ‘ವೈಟ್ ಕಾಲರ್’ ಭಯೋತ್ಪಾದಕ ಜಾಲದ ಭಾಗವಾಗಿದ್ದರೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಆರೋಪಿಗಳ ಪೈಕಿ ಓರ್ವ ಭಟ್‌ ಗೆ ದೂರವಾಣಿ ಕರೆ ಮಾಡಿದ್ದ ಎಂದು ಅಧಿಕಾರಿಯೋರ್ವರು ತಿಳಿಸಿದರು.

►ವೈದ್ಯಕೀಯ ವಿದ್ಯಾರ್ಥಿ ಬಂಧನ

ದಿಲ್ಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಪಶ್ಚಿಮ ಬಂಗಾಳ ಪೋಲಿಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಲ್-ಫಲಾಹ್ ವಿವಿಯ ಎಂಬಿಬಿಎಸ್ ವಿದ್ಯಾರ್ಥಿ ನಿಸಾರ್ ಆಲಂ ಎಂಬಾತನನ್ನು ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ ಪುರ ಜಿಲ್ಲೆಯ ದಲ್ಖೋಲಾದಲ್ಲಿ ಬಂಧಿಸಿದ್ದಾರೆ.

ಆಲಂ ಮತ್ತು ಆತನ ಕುಟುಂಬ ಕೆಲವು ಸಮಯದಿಂದ ಪಂಜಾಬಿನ ಲೂಧಿಯಾನದಲ್ಲಿ ವಾಸವಾಗಿದ್ದರೂ ಅವರ ಪೂರ್ವಜರ ಮನೆ ಈಗಲೂ ದಲ್ಖೋಲಾದ ಕೋನಾಲ ಗ್ರಾಮದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಆಲಂ ಕುಟುಂಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತನ್ನ ತಾಯಿ ಮತ್ತು ಸೋದರಿ ಜೊತೆಗೆ ದಲ್ಖೋಲಾಕ್ಕೆ ಬಂದಿದ್ದ. ಮೊಬೈಲ್ ಟವರ್ ಆಧರಿಸಿ ಆತನ ಚಲನವಲನಗಳನ್ನು ಪತ್ತೆ ಹಚ್ಚಿದ ಎನ್‌ಐಎ ಅಧಿಕಾರಿಗಳು ಶುಕ್ರವಾರ ಅಲ್ಲಿಗೆ ತೆರಳಿ ಆತನನ್ನು ಬಂಧಿಸಿದ್ದಾರೆ. ಆತನನ್ನು ದಿಲ್ಲಿಗೆ ಕರೆತರಲಾಗುತ್ತಿದೆ ಎಂದು ಲಭ್ಯ ಮಾಹಿತಿಗಳು ತಿಳಿಸಿವೆ.

‘ಆಲಂ ಮತ್ತು ಆತನ ಕುಟುಂಬದ ಇತರ ಸದಸ್ಯರು ತಮ್ಮ ಬಂಧುಗಳನ್ನು ಭೇಟಿಯಾಗಲು ಆಗಾಗ್ಗೆ ಕೋನಾಲಿಗೆ ಬರುತ್ತಿದ್ದರು. ಆತ ಸಭ್ಯ ಮತ್ತು ಮೃದು ಮಾತಿನ ಯುವಕನಾಗಿದ್ದು,ಆತ ಬಂಡಾಯ ಚಟುವಟಿಕೆಗಳೊಂದಿಗೆ ಗುರುತಿಸಿಕೊಂಡಿದ್ದ ಎಂದು ನಾವೆಂದಿಗೂ ಊಹಿಸಿರಲಿಲ್ಲ’ ಎಂದು ಶನಿವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೋನಾಲ ನಿವಾಸಿಯೋರ್ವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News