‘ಮುಸ್ಲಿಮ್ ಮಹಾಪಂಚಾಯತ್’ಗೆ ಅನುಮತಿ ನಿರಾಕರಿಸಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಅ.29ರಂದು ‘ಅಖಿಲ ಭಾರತ ಮುಸ್ಲಿಮ್ ಮಹಾಪಂಚಾಯತ್’ನ್ನು ನಡೆಸಲು ನಿರಾಕ್ಷೇಪಣಾ ಪತ್ರಕ್ಕಾಗಿ ದಿಲ್ಲಿ ಪೊಲೀಸರಿಗೆ ನಿರ್ದೇಶನ ನೀಡಲು ದಿಲ್ಲಿ ಉಚ್ಚ ನ್ಯಾಯಾಲಯವು ನಿರಾಕರಿಸಿದೆ. ಆ ಸಮಯದಲ್ಲಿ ಹಲವಾರು ಹಿಂದೂ ಉತ್ಸವಗಳು ನಡೆಯಲಿರುವುದರಿಂದ ಕಾರ್ಯಕ್ರಮವು ಕೋಮು ಉದ್ವಿಗ್ನತೆಯನ್ನುಂಟು ಮಾಡಬಹುದು ಎಂದು ಅದು ಹೇಳಿದೆ.
ಕಾರ್ಯಕ್ರಮದ ಪೋಸ್ಟರ್ ಕೋಮು ಭಾವನೆಗಳನ್ನು ಸೂಚಿಸುತ್ತಿದೆ ಮತ್ತು ಸಮಾವೇಶವು ಕೋಮು ಸೂಕ್ಷ್ಮವಾಗಿರುವ ಹಳೆಯ ದಿಲ್ಲಿ ಪ್ರದೇಶದಲ್ಲಿ ನಡೆಯಲಿದೆ,ಹೀಗಾಗಿ ಅನುಮತಿಯನ್ನು ನೀಡಲು ಸಾಧ್ಯವಿಲ್ಲ ಎಂದು ನ್ಯಾ. ಸುಬ್ರಮಣಿಯಂ ಪ್ರಸಾದ ಹೇಳಿದರು.
‘ಮಿಷನ್ ಸೇವ್ ಕಾನ್‌ಸ್ಟಿಟ್ಯೂಷನ್ ’ಎಂಬ ಗುಂಪು ಈಗ ರದ್ದಾಗಿರುವ ಕಾರ್ಯಕ್ರಮವನ್ನು ಆಯೋಜಿಸಿತ್ತು. ದಿಲ್ಲಿ ಪೋಲಿಸ್ ಮತ್ತು ದಿಲ್ಲಿ ಮಹಾನಗರ ಪಾಲಿಕೆ ಮೊದಲು ಸಮಾವೇಶಕ್ಕೆ ಅನುಮತಿ ನೀಡಿದ್ದವಾದರೂ ಬಳಿಕ ಅದನ್ನು ಹಿಂದೆಗೆದುಕೊಂಡಿದ್ದವು.
ಅನುಮತಿಯನ್ನು ಹಿಂದೆಗೆದುಕೊಳ್ಳುವ ನಿರ್ಧಾರವನ್ನೂ ಎತ್ತಿ ಹಿಡಿದಿರುವ ಉಚ್ಚ ನ್ಯಾಯಾಲಯವು,ನವರಾತ್ರಿ ಮತ್ತು ದೀಪಾವಳಿ ನಡುವೆ ಕರ್ವಾಚೌತ್,ಧನ್‌ತೇರಾಸ್ ಇತ್ಯಾದಿಗಳಂತಹ ಹಲವಾರು ಹಬ್ಬಗಳಿವೆ. ಮಹಾಲಯ ಅಂತ್ಯದಿಂದ ದೀಪಾವಳಿವರೆಗಿನ ಅವಧಿಯು ಹಿಂದೂ ಸಮುದಾಯದ ಪಾಲಿಗೆ ಅತ್ಯಂತ ಪವಿತ್ರವಾಗಿದೆ. ಜನರಿಗೆ ತಮ್ಮ ಹಕ್ಕುಗಳ ಬಗ್ಗೆ ಶಿಕ್ಷಿತರನ್ನಾಗಿ ಮಾಡುವುದು ಮಹಾಪಂಚಾಯತ್‌ನ ಉದ್ದೇಶವಾಗಿದೆ ಎಂದು ಹೇಳಲಾಗಿದ್ದರೂ ಪೋಸ್ಟರ್‌ಗಳ ಧಾಟಿಯು ಕಾರ್ಯಕ್ರಮವು ಕೋಮು ಭಾವನೆಗಳನ್ನು ಹೊಂದಿರಬಹುದು ಎನ್ನುವುದನ್ನು ಸೂಚಿಸುತ್ತಿದೆ.
ಹಳೆಯ ದಿಲ್ಲಿಯು ವಿವಿಧ ಸಮುದಾಯಗಳ ಜನರು ವಾಸವಾಗಿರುವ ಕೋಮುಸೂಕ್ಷ್ಮ ಪ್ರದೇಶವಾಗಿದೆ ಮತ್ತು ಅಲ್ಲಿ ಕೋಮು ಹಿಂಸಾಚಾರಗಳು ಹೊಸದೇನಲ್ಲ. ಹೀಗಾಗಿ ಕಾರ್ಯಕ್ರಮವು ಪ್ರದೇಶದಲ್ಲಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಬಹುದು ಎಂದು ತನ್ನ ಆದೇಶದಲ್ಲಿ ಹೇಳಿದೆ.
ಹಬ್ಬಗಳು ಮುಗಿದ ನಂತರ ಅರ್ಜಿದಾರ ಸಂಘಟನೆಯು ತನ್ನ ಕಾರ್ಯಕ್ರಮವನ್ನು ನಡೆಸಬಹುದು ಮತ್ತು ಅದು ಅನುಮತಿಗಾಗಿ ಅಧಿಕಾರಿಗಳಿಗೆ ಹೊಸದಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಎಂದು ಹೇಳಿದ ನ್ಯಾಯಾಲಯವು,ಅರ್ಹತೆಗಳ ಆಧಾರದಲ್ಲಿ ಅನುಮತಿಯ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ನ್ಯಾಯವಾದಿ ಮಹಮೂದ್ ಪ್ರಾಚಾ ಅವರು ಮಿಷನ್ ಸೇವ್ ಕಾನ್‌ಸ್ಟಿಟ್ಯೂಷನ್‌ನ ರಾಷ್ಟ್ರೀಯ ಸಂಚಾಲಕ,ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ವಜಾಹತ್ ಹಬೀಬುಲ್ಲಾ ಅವರು ಪ್ರಧಾನ ಸಲಹೆಗಾರ ಮತ್ತು ಮಾಜಿ ಹೈಕೋರ್ಟ್ ನ್ಯಾಯಾಧೀಶ ನ್ಯಾ.ಬಿ.ಜಿ.ಕೊಲ್ಸೆ ಅವರು ಸಲಹೆಗಾರರಾಗಿದ್ದಾರೆ. ಇಸ್ಲಾಮಿಕ್ ಧರ್ಮಗುರು ಮೌಲಾನಾ ತೌಕೀರ್ ರಝಾ ಅವರು ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದಾರೆ.