2020ರ ದಿಲ್ಲಿ ಗಲಭೆಗಳು | ಸಾಕ್ಷ್ಯಾಧಾರಗಳ ಕೊರತೆಯಿಂದ ಒಂದೇ ವಾರದಲ್ಲಿ ನಾಲ್ಕು ಪ್ರಕರಣಗಳಲ್ಲಿ 30 ಜನರ ಖುಲಾಸೆ
PC ; PTI
ಹೊಸದಿಲ್ಲಿ: 2020, ಫೆಬ್ರವರಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸಂಭವಿಸಿದ್ದ ಗಲಭೆಗೆ ಸಂಬಂಧಿಸಿದ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ 30 ಜನರನ್ನು ಇಲ್ಲಿಯ ಕರ್ಕರಡೂಮಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಖುಲಾಸೆಗೊಳಿಸಿದೆ. ಅವರು ಮೂವರ ಕೊಲೆ,ಲೂಟಿ ಮತ್ತು ಬೆಂಕಿ ಹಚ್ಚುವಿಕೆ ಆರೋಪಗಳನ್ನು ಎದುರಿಸುತ್ತಿದ್ದರು.
ನ್ಯಾ.ಪುಲಸ್ತ್ಯ ಪ್ರಮಾಚಲ ಅವರು ಮೇ 13,ಮೇ 14,ಮೇ 16 ಮತ್ತು ಮೇ 17ರಂದು ಹೀಗೆ ಒಂದು ವಾರದೊಳಗೆ ನಾಲ್ಕು ಖುಲಾಸೆ ಆದೇಶಗಳನ್ನು ಹೊರಡಿಸಿದ್ದಾರೆ.
ಖುಲಾಸೆಗೊಂಡಿರುವ 30 ಜನರು 2020ರ ದಿಲ್ಲಿ ಗಲಭೆ ಸಂದರ್ಭದಲ್ಲಿ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿತ್ತು.
ಒಂದು ಪ್ರಕರಣದಲ್ಲಿ ಆರೋಪಿಗಳು ತನ್ನ ಔಷಧಿ ಅಂಗಡಿಯನ್ನು ಲೂಟಿ ಮಾಡಿ ಬೆಂಕಿ ಹಚ್ಚಿದ್ದರು ಎಂದು ದೂರುದಾರರು ಆರೋಪಿಸಿದ್ದರು.
ಇತರ ಮೂರು ಪ್ರಕರಣಗಳು ಶಾಬಾಜ್,ಅಕಿಲ್ ಅಹ್ಮದ್ ಮತ್ತು ಆಮಿರ್ ಅಲಿ ಎನ್ನುವವರ ಹತ್ಯೆಗಳಿಗೆ ಸಂಬಂಧಿಸಿದ್ದವು. ಈ ಮೂರೂ ಪ್ರಕರಣಗಳನ್ನು ಸಹಾಯಕ ಸಬ್-ಇನ್ಸ್‌ಪೆಕ್ಟರ್ ಓರ್ವರ ದೂರಿನ ಆಧಾರದಲ್ಲಿ ದಾಖಲಿಸಲಾಗಿತ್ತು.
ಮೇ 13ರಂದು ನ್ಯಾ.ಪ್ರಮಾಚಲ ಅವರು ಆಮಿರ್ ಅಲಿ ಹತ್ಯೆ ಪ್ರಕರಣದ 14 ಆರೋಪಿಗಳನ್ನು ಖುಲಾಸೆಗೊಳಿಸಿದ್ದರು,ಆದರೆ ಶಂಕಿತರ ಪೈಕಿ ಲೋಕೇಶ ಕುಮಾರ ಸೋಳಂಕಿ ಎಂಬಾತನನ್ನು ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸಿದ್ದಕ್ಕಾಗಿ ಮತ್ತು ವದಂತಿಗಳನ್ನು ಹರಡುವ ಮೂಲಕ ಸಾರ್ವಜನಿಕ ದುಷ್ಕೃತ್ಯಕ್ಕಾಗಿ ತಪ್ಪಿತಸ್ಥನೆಂದು ಘೋಷಿಸಿದ್ದರು.
ಇತರ ಮೂರು ಪ್ರಕರಣಗಳಲ್ಲಿ ಶಂಕಾತೀತವಾಗಿ ಆರೋಪಗಳನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್ ವಿಫಲಗೊಂಡ ಬಳಿಕ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.
2020 ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ಭುಗಿಲೆದ್ದಿದ್ದ ಘರ್ಷಣೆಗಳಲ್ಲಿ 53 ಜನರು ಕೊಲ್ಲಲ್ಪಟ್ಟು,ನೂರಾರು ಜನರು ಗಾಯಗೊಂಡಿದ್ದರು.