×
Ad

ಡಿಜಿಟಲ್ ಅರೆಸ್ಟ್| 80ರ ಹರೆಯದ ವೃದ್ಧನಿಗೆ 96 ಲಕ್ಷ ರೂ.ವಂಚನೆ: ಇಬ್ಬರು ಬ್ಯಾಂಕ್ ಉದ್ಯೋಗಿಗಳು ಸೇರಿ ಐವರ ಬಂಧನ

Update: 2026-01-09 20:41 IST

photo credit: PTI

ಹೊಸದಿಲ್ಲಿ,ಜ.9: ಡಿಜಿಟಲ್ ಅರೆಸ್ಟ್ ಜಾಲವೊಂದನ್ನು ಭೇದಿಸಿರುವ ದಿಲ್ಲಿ ಪೋಲಿಸರು 80ರ ಹರೆಯದ ವ್ಯಕ್ತಿಗೆ ಸುಮಾರು ಒಂದು ಕೋಟಿ ರೂ.ಗಳನ್ನು ವಂಚಿಸಿದ ಆರೋಪದಲ್ಲಿ ಇಬ್ಬರು ಖಾಸಗಿ ಬ್ಯಾಂಕ್ ಉದ್ಯೋಗಿಗಳು ಸೇರಿದಂತೆ ಐವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.

ಆರೋಪಿಗಳು ಕಾನೂನು ಜಾರಿ ಮತ್ತು ಕೇಂದ್ರೀಯ ಸಂಸ್ಥೆಗಳ ಅಧಿಕಾರಿಗಳ ಸೋಗಿನಲ್ಲಿ ವೃದ್ಧ ಮತ್ತು ಅವರ ಪತ್ನಿಯನ್ನು ಏಳು ದಿನಗಳ ಕಾಲ ಡಿಜಿಟಲ್ ಬಂಧನದಲ್ಲಿ ಇರಿಸಿದ್ದರು ಎಂದರು.

ವಂಚಕರು ಬಲಿಪಶುವನ್ನು ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಿ ತಾವು ದೂರಸಂಪರ್ಕ ಮತ್ತು ತನಿಖಾ ಸಂಸ್ಥೆಗಳ ಅಧಿಕಾರಿಗಳೆಂದು ಹೇಳಿಕೊಂಡು, ಅವರ ಮೊಬೈಲ್ ಫೋನ್ ಸಂಖ್ಯೆ ಮತ್ತು ಆಧಾರ್ ಕಾನೂನುಬಾಹಿರ ಚಟುವಟಿಕೆಗಳೊಂದಿಗೆ ತಳುಕು ಹಾಕಿಕೊಂಡಿವೆ ಎಂದು ಹೇಳಿ ಕಾನೂನು ಕ್ರಮದ ಬೆದರಿಕೆಯೊಡ್ಡಿದ್ದರು.

ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮರಳಿಸಲಾಗುವುದು ಎಂದು ಭರವಸೆ ನೀಡುವ ಮೂಲಕ ಆರೋಪಿಗಳು ವೃದ್ಧರ ಮೇಲೆ ಒತ್ತಡ ಹೇರಿ ತನ್ನ ಇಡೀ ಜೀವಮಾನದ ಉಳಿತಾಯವನ್ನು ತಾವು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ ಮಾಡಿದ್ದರು. ಇದಕ್ಕಾಗಿ ತನ್ನ ಸ್ಥಿರ ಠೇವಣಿಯನ್ನು ಅವಧಿಗೆ ಮುನ್ನವೇ ಮುಕ್ತಾಯಗೊಳಿಸಿದ್ದ ಬಲಿಪಶು ಚಿನ್ನವನ್ನು ಅಡವಿಟ್ಟು ಸಾಲವನ್ನೂ ಪಡೆದಿದ್ದರು.

ಆರೋಪಿಗಳು ವ್ಯಕ್ತಿಗೆ 96 ಲ.ರೂ.ಗಳನ್ನು ವಂಚಿಸಿದ್ದಾರೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷದ ನ.4ರಂದು ದೂರು ದಾಖಲಾದ ಬಳಿಕ ತನಿಖೆ ಆರಂಭಗೊಂಡಿತ್ತು.

ಆರೋಪಿಗಳ ಪೈಕಿ ಪ್ರದೀಪ್ ಕುಮಾರ್‌ ಎಂಬಾತನನ್ನು ಹರ್ಯಾಣದ ಹಿಸ್ಸಾರ್‌ನಲ್ಲಿ ಪತ್ತೆ ಹಚ್ಚಲಾಗಿತ್ತು. ಹಲವಾರು ಮೊಬೈಲ್ ಫೋನ್‌ಗಳ ಬಳಕೆಯು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಹಿಸಾರ್‌ನಿಂದ ಇನ್ನೋರ್ವ ಆರೋಪಿ ನಮನದೀಪ್ ಮಲಿಕ್ ಎಂಬಾತನ ಬಂಧನಕ್ಕೆ ಈ ಮಾಹಿತಿ ನೆರವಾಗಿತ್ತು.

ಮೂರನೇ ಆರೋಪಿ ಶಶಿಕಾಂತ ಪಟ್ಟನಾಯಕ್ ಎಂಬಾತನನ್ನು ಒಡಿಶಾದ ಭುವನೇಶ್ವರದಲ್ಲಿ ಬಂಧಿಸಲಾಗಿದ್ದು, ವಂಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಹೆಚ್ಚಿನ ತನಿಖೆಯಲ್ಲಿ ಖಾಸಗಿ ಬ್ಯಾಂಕ್‌ವೊಂದರ ಪಶ್ಚಿಮ ದಿಲ್ಲಿ ಶಾಖೆಯ ಅಧಿಕಾರಿ ನಿಲೇಶ್‌ ಕುಮಾರ್‌ ಮತ್ತು ಚಂದನ್‌ ಕುಮಾರ್‌ ಅವರು ಫೋರ್ಜರಿ ದಾಖಲೆಗಳನ್ನು ಬಳಸಿ ನಕಲಿ ಚಾಲ್ತಿ ಖಾತೆಯನ್ನು ತೆರೆಯಲು ವಂಚಕ ಜಾಲಕ್ಕೆ ನೆರವಾಗಿದ್ದರು ಎನ್ನುವುದು ಬಯಲುಗೊಂಡಿತ್ತು. ಈ ಖಾತೆಗಳನ್ನು ಸೈಬರ್ ಅಪರಾಧದ ಹಣವನ್ನು ವರ್ಗಾಯಿಸಲು ಬಳಸಲಾಗುತ್ತಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News