ವಿವಿಗಳಲ್ಲಿ ತಾರತಮ್ಯ: ಎಸ್ಸಿ/ಎಸ್ಟಿ ವಿದ್ಯಾರ್ಥಿಗಳ ರಕ್ಷಣೆಗೆ ತಜ್ಞರ ಸಮಿತಿ
UGC | Photo: PTI
ಹೊಸದಿಲ್ಲಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾಗಿರುವ ಎಸ್ಸಿ, ಎಸ್ಟಿ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ತನ್ನ ನಿಯಮಾವಳಿಗಳನ್ನು ಪರಿಷ್ಕರಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC)ವು ಸಜ್ಜಾಗಿದೆ. ಈ ವಿದ್ಯಾರ್ಥಿಗಳಿಗಾಗಿ ತಾರತಮ್ಯರಹಿತ ವಾತಾವರಣವನ್ನು ಖಚಿತಪಡಿಸಲು ಪರಿಹಾರ ಕ್ರಮಗಳನ್ನು ಸೂಚಿಸಲು ತಜ್ಞರ ಸಮಿತಿಯೊಂದನ್ನು ಅದು ರಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳು ಸರ್ವೋಚ್ಚ ನ್ಯಾಯಾಲಯವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈ ವರ್ಗಗಳ ವಿದ್ಯಾರ್ಥಿಗಳ ಸಾವುಗಳನ್ನು ರಚನಾತ್ಮಕ ಚಿಂತನೆ ಅಗತ್ಯವಾಗಿರುವ ‘ಸೂಕ್ಷ್ಮ ವಿಷಯ’ ಎಂದು ಬಣ್ಣಿಸಿತ್ತು.
ಯುಜಿಸಿಯು 2012ರಲ್ಲಿ ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಗೆ ಉತ್ತೇಜನ) ನಿಯಮಾವಳಿಗಳನ್ನು ಹೊರಡಿಸಿತ್ತು. ಪ್ರವೇಶಕ್ಕೆ ಸಂಬಂಧಿಸಿದಂತೆ ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ತಾರತಮ್ಯಮಾಡದಂತೆ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನಿಯಮಾವಳಿಗಳಲ್ಲಿ ಸೂಚಿಸಲಾಗಿತ್ತು. ಜಾತಿ,ಧರ್ಮ,ಭಾಷೆ,ಜನಾಂಗೀಯತೆ,ಲಿಂಗ ಅಥವಾ ಅಂಗವೈಕಲ್ಯದ ಆಧಾರದಲ್ಲಿ ಯಾವುದೇ ವಿದ್ಯಾರ್ಥಿಗೆ ಕಿರುಕುಳವನ್ನು ತಡೆಯುವಂತೆ ಹಾಗೂ ಕಿರುಕುಳ ನೀಡುವ ವ್ಯಕ್ತಿಗಳು ಮತ್ತು ಅಧಿಕಾರಿಗಳನ್ನು ದಂಡಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ತಾಕೀತು ಮಾಡಲಾಗಿತ್ತು.
ಯುಜಿಸಿಯು ಈ ವರ್ಷದ ಎಪ್ರಿಲ್ ನಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಇತರ ಹಿಂದುಳಿದ ವರ್ಗಗಳ ಪ್ರತಿನಿಧಿಗಳನ್ನು ಮತ್ತು ಮಹಿಳೆಯರನ್ನು ವಿದ್ಯಾರ್ಥಿಗಳ ಕುಂದುಕೊರತೆ ನಿವಾರಣಾ ಸಮಿತಿಗಳ ಅಧ್ಯಕ್ಷರನ್ನಾಗಿ ಅಥವಾ ಸದಸ್ಯರನ್ನಾಗಿ ನೇಮಕಗೊಳಿಸುವುದನ್ನು ಕಡ್ಡಾಯಗೊಳಿಸಿತ್ತು.
ಆದರೆ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ಗಳಲ್ಲಿ ಈ ಸಮುದಾಯಗಳ ವಿರುದ್ಧ ತಾರತಮ್ಯದ ಕುರಿತು ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದೆ.
ತಾರತಮ್ಯದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ದಲಿತ ವಿದ್ಯಾರ್ಥಿಗಳಾದ ರೋಹಿತ ವೇಮುಲ ಮತ್ತು ಪಾಯಲ್ ತಡ್ವಿ ಅವರ ತಾಯಂದಿರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಸಂದರ್ಭ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಎಂ.ಎಂ.ಸುಂದರೇಶ ಅವರನ್ನೊಳಗೊಂಡಿದ್ದ ಸರ್ವೋಚ್ಚ ನ್ಯಾಯಾಲಯದ ಪೀಠವು ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿತ್ತು. ವೇಮುಲ ಹೈದರಾಬಾದ ಕೇಂದ್ರೀಯ ವಿವಿಯಲ್ಲಿ ಮತ್ತು ತಡ್ವಿ ಮುಂಬೈನ ಟಿಎನ್ ಟೋಪಿವಾಲಾ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದರು.
ಈ ವರ್ಷ ಐಐಟಿ ಬಾಂಬೆಯ ಮೊದಲ ವರ್ಷದ ವಿದ್ಯಾರ್ಥಿ ದರ್ಶನ ಸೋಲಂಕಿ ಜಾತಿ ತಾರತಮ್ಯದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ವಿಷಯದಲ್ಲಿ ಮತ್ತೆ ಕಳವಳಗಳನ್ನು ಸೃಷ್ಟಿಸಿತ್ತು.
ಇತ್ತೀಚಿಗೆ ವಿದ್ಯಾರ್ಥಿಗಳಿಗಾಗಿ ತಾರತಮ್ಯ ವಿರೋಧಿ ಮಾರ್ಗಸೂಚಿಗಳನ್ನು ಹೊರಡಿಸಿದ್ದ ಐಐಟಿ ಬಾಂಬೆ,ಪರಸ್ಪರರ ಜೆಇಇ (ಅಡ್ವಾನ್ಸ್ಡ್) ರ್ಯಾಂಕ್ಗಳು,ಗೇಟ್ ಅಂಕಗಳು ಮತ್ತು ಜಾತಿ ಅಥವಾ ಇತರ ಸಂಬಂಧಿತ ವಿಷಯಗಳ ಬಗ್ಗೆ ಕೇಳುವುದರಿಂದ ದೂರವಿರುವಂತೆ ವಿದ್ಯಾರ್ಥಿಗಳನ್ನು ಆಗ್ರಹಿಸಿತ್ತು.