12ರಾಜ್ಯಗಳಲ್ಲಿ ಮಹಿಳೆಯರಿಗೆ ನೇರ ವರ್ಗಾವಣೆಯಾಗುತ್ತಿರುವ ಹಣ ಎಷ್ಟು ಗೊತ್ತೇ?
ಸಾಂದರ್ಭಿಕ ಚಿತ್ರ PC: istockphoto
ಹೊಸದಿಲ್ಲಿ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಯ ಮಾದರಿಯನ್ನು ಇದೀಗ ದೇಶಾದ್ಯಂತ 12 ರಾಜ್ಯಗಳು ಅನುಸರಿಸುತ್ತಿದ್ದು, ವಾರ್ಷಿಕ 1,68,050 ಕೋಟಿ ರೂಪಾಯಿ ವರ್ಗಾವಣೆಯಾಗುತ್ತಿದೆ. 2022-23ರಲ್ಲಿ ಕೇವಲ ಎರಡು ರಾಜ್ಯಗಳಷ್ಟೇ ಈ ಪ್ರೋತ್ಸಾಹಧನ ವಿತರಿಸುತ್ತಿದ್ದವು. ಎರಡು ವರ್ಷ ಹಿಂದೆ ದೇಶದ ಜಿಡಿಪಿಯ ಶೇಕಡ 0.2ರಷ್ಟು ಹಣ ಈ ಉದ್ದೇಶಕ್ಕೆ ಬಳಕೆಯಾಗುತ್ತಿದ್ದರೆ ಇದೀಗ ಈ ಪ್ರಮಾಣ ಶೇಕಡ 0.5ಕ್ಕೇರಿದೆ ಎಂದು ಪಿಆರ್‌ಎಸ್ ಲೆಜಿಸ್ಲೇಟಿವ್ ರೀಸರ್ಚ್ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.
ಕರ್ನಾಟಕದಲ್ಲಿ ಗೃಹಲಕ್ಷ್ಮಿ, ಮಹಾರಾಷ್ಟ್ರದಲ್ಲಿ ಲಾಡ್ಲಿ ಬೆಹನಾ, ಬಿಹಾರದಲ್ಲಿ ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆ ಹೀಗೆ ಚುನಾವಣೆಯಲ್ಲಿ ಬಹುಬೇಗ ಮಹಿಳಾ ಮತದಾರರನ್ನು ಓಲೈಸಲು ವಿವಿಧ ಪಕ್ಷಗಳು ಬೇರೆ ಬೇರೆ ಹೆಸರಿನಲ್ಲಿ ನಗದು ವರ್ಗಾವಣೆ ಯೋಜನೆಯನ್ನು ಜಾರಿಗೆ ತಂದಿವೆ.
ಮುಂದಿನ ವರ್ಷ ಚುನಾವಣೆ ನಡೆಯುವ ಅಸ್ಸಾಂಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಈ ಯೋಜನೆಗೆ ಅನುದಾನ ಹಂಚಿಕೆಯನ್ನು ಹೆಚ್ಚಿಸಲಾಗಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಅಸ್ಸಾಂ ಈ ವರ್ಷ ಶೇಕಡ 31ರಷ್ಟು ಹಾಗೂ ಪಶ್ಚಿಮ ಬಂಗಾಳ ಶೇಕಡ 15ರಷ್ಟು ಅನುದಾನ ಹೆಚ್ಚಿಸಿವೆ. 2024ರ ಅಕ್ಟೋಬರ್‌ನಲ್ಲಿ ಜಾರ್ಖಂಡ್ ಸರ್ಕಾರ ಸಿಎಂ ಮೈಯಾನ್ ಸಮ್ಮಾನ್ ಯೋಜನೆಯ ಮಾಸಿಕ ವೇತನವನ್ನು 1000 ರೂಪಾಯಿಗಳಿಂದ 2500 ರೂಪಾಯಿಗಳಿಗೆ ಹೆಚ್ಚಿಸಿತ್ತು.
ಒಡಿಶಾ ಸರ್ಕಾರ ರೈತರಿಗೆ ನೇರ ನಗದು ವರ್ಗಾಯಿಸಲು ಆರಂಭಿಸಿದ್ದ ಯೋಜನೆ ಇದೀಗ ವ್ಯಾಪಕವಾಗುತ್ತಿದೆ. ಸಬ್ಸಿಡಿಗಳ ಮೇಲೆ ರಾಜ್ಯಗಳು ಹೆಚ್ಚುವರಿ ವೆಚ್ಚ ಮಾಡುತ್ತಿರುವ ಬಗ್ಗೆ ಆರ್‌ಬಿಐ ಈಗಾಗಲೇ ಕಳವಳ ವ್ಯಕ್ತಪಡಿಸಿದೆ. ಷರತ್ತು ರಹಿತ ನಗದು ವರ್ಗಾವಣೆ ಆರಂಭಿಸಿರುವ 12 ರಾಜ್ಯಗಳ ಪೈಕಿ ಈಗಾಗಲೇ ಆರು ರಾಜ್ಯಗಳು 2025-26ರಲ್ಲಿ ವಿತ್ತೀಯ ಕೊರತೆ ಎದುರಿಸುವ ಅಂದಾಜು ಇದೆ.