×
Ad

ಎಚ್-1ಬಿ ವೀಸಾ ಶುಲ್ಕ ಏರಿಕೆ ಘೋಷಣೆಯ ಬೆನ್ನಲ್ಲೆ ಆತಂಕದ ವಾತಾವರಣ : ಭಾರತಕ್ಕೆ ಹೊರಟಿದ್ದ ವಿಮಾನದಿಂದ ಇಳಿದ ಪ್ರಯಾಣಿಕರು!

Update: 2025-09-22 21:44 IST

PC : X \ @YearOfTheKraken

ಹೊಸದಿಲ್ಲಿ, ಸೆ. 22: ವಿದೇಶಿ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು ಹೆಚ್ಚಾಗಿ ಬಳಸುವ ಎಚ್-1ಬಿ ವೀಸಾಗಳ ವಾರ್ಷಿಕ ಶುಲ್ಕವನ್ನು ಬರೋಬ್ಬರಿ ಒಂದು ಲಕ್ಷ ಡಾಲರ್‌ಗೆ ಏರಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರವು ಭಾರತೀಯ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಹಾಹಾಕಾರ ಎಬ್ಬಿಸಿದೆ.

ಈ ಆಘಾತಕಾರಿ ನಿರ್ಧಾರವನ್ನು ಟ್ರಂಪ್ ಆಡಳಿತ ಶುಕ್ರವಾರ ಘೋಷಿಸಿತು. ಅದೇ ದಿನ, ಭಾರತಕ್ಕೆ ಬರಲು ಎಮಿರೇಟ್ಸ್ ಏರ್‌ಲೈನ್ಸ್ ವಿಮಾನ ಹತ್ತಿದ್ದ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಿಗೆ ಈ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತ್ತು. ಸುದ್ದಿ ಘೋಷಣೆಯ ಬಳಿಕ ವಿಮಾನದಲ್ಲಿ ಗಾಬರಿಯ ವಾತಾವರಣವಿತ್ತು. ವಿಮಾನ ಹಾರಾಟ ಆರಂಭಿಸುವ ಮುನ್ನ, ಹಲವಾರು ಭಾರತೀಯ ಪ್ರಯಾಣಿಕರು ಸ್ಯಾನ್‌ಫ್ರಾನ್ಸಿಸ್ಕೊ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಕೆಳಗಿಳಿದರು.

ಎಮಿರೇಟ್ಸ್ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಈ ಆತಂಕದ ಕ್ಷಣಗಳ ವೀಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ. ಒಮ್ಮೆ ಅಮೆರಿಕದಿಂದ ಹೊರಹೋದರೆ ಮತ್ತೆ ಅಲ್ಲಿಗೆ ಮರಳಲು ಸಾಧ್ಯವಾಗದು ಎಂಬ ಹೆದರಿಕೆಯಲ್ಲಿ ಹಲವಾರು ಪ್ರಯಾಣಿಕರು ವಿಮಾನದಿಂದ ಕೆಳಗಿಳಿಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಪ್ರಯಾಣಿಕರು ಆಸನಗಳ ಮಧ್ಯಭಾಗದಲ್ಲಿ ನಿಂತಿರುವುದನ್ನು ಮತ್ತು ಇನ್ನು ಕೆಲವರು ತಮ್ಮ ಫೋನ್‌ನತ್ತ ದಿಟ್ಟಿಸುತ್ತಿರುವುದನ್ನು ಇನ್ನೊಂದು ವೀಡಿಯೊ ತೋರಿಸುತ್ತದೆ. ಕೆಲವರು ವಿಮಾನ ಹಾರಾಟ ಆರಂಭಿಸುತ್ತದೆಯೇ ಮತ್ತು ಯಾವಾಗ ಎಂಬ ಬಗ್ಗೆ ಮಾಹಿತಿ ಇಲ್ಲದೆ ಅತ್ತಿತ್ತ ನೋಡುತ್ತಿದ್ದಾರೆ.

ಇನ್ನೊಂದು ವೀಡಿಯೊದಲ್ಲಿ, ಅಭೂತಪೂರ್ವ ಸನ್ನಿವೇಶಗಳ ಹಿನ್ನೆಲೆಯಲ್ಲಿ, ಪ್ರಯಾಣಿಕರು ವಿಮಾನದಿಂದ ಇಳಿಯಲು ಬಯಸಿದರೆ ಇಳಿಯಬಹುದು ಎಂಬ ಸೂಚನೆಯನ್ನು ವಿಮಾನದ ಕ್ಯಾಪ್ಟನ್ ನೀಡುವುದು ಕೇಳುತ್ತದೆ.

‘‘ಲೇಡೀಸ್ ಆ್ಯಂಡ್ ಜಂಟಲ್‌ಮನ್, ಇದು ಕ್ಯಾಪ್ಟನ್ ಮಾತನಾಡುತ್ತಿರುವುದು. ಹಾಲಿ ಸನ್ನಿವೇಶಗಳು ಖಂಡಿತವಾಗಿಯೂ ಎಮಿರೇಟ್ಸ್ ವಿಮಾನದಲ್ಲಿರುವ ನಮಗೆ ಆಘಾತಕಾರಿಯಾಗಿದೆ. ಹಲವು ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸಲು ಬಯಸುವುದಿಲ್ಲ ಎನ್ನುವುದು ನಮಗೆ ತಿಳಿದಿದೆ. ಅದು ಸರಿಯಾಗಿಯೇ ಇದೆ. ನೀವು ಇಳಿಯಲು ಬಯಸುವಿರಾದರೆ, ಹಾಗೆಯೇ ಮಾಡಿ ಎಂದಷ್ಟೇ ನಿಮಗೆ ತಿಳಿಸಲು ನಾವು ಇಚ್ಛಿಸುತ್ತೇವೆ’’ ಎಂದು ಕ್ಯಾಪ್ಟನ್ ಹೇಳುತ್ತಾರೆ.

‘‘ಶುಕ್ರವಾರ ಬೆಳಗ್ಗೆ ಸ್ಯಾನ್ ಫ್ರಾನ್ಸಿಸ್ಕೊ ವಿಮಾನ ನಿಲ್ದಾಣದಲ್ಲಿ ಭಾರೀ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಹಾಲಿ ಮತ್ತು ಹೊಸ ಎಚ್-1ಬಿ ವೀಸಾದಾರರ ಮೇಲೆ ಪರಿಣಾಮ ಬೀರುವ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದರು. ಅದು ಎಮಿರೇಟ್ಸ್ ವಿಮಾನದಲ್ಲಿ ಭಾರತಕ್ಕೆ ಹೊರಟಿದ್ದ ಹಲವಾರು ಭಾರತೀಯ ಪ್ರಯಾಣಿಕರ ಗಾಬರಿಗೆ ಕಾರಣವಾಯಿತು. ಕೆಲವರು ವಿಮಾನದಿಂದ ಕೆಳಗಿಳಿದರು’’ ಎಂದು ವೀಡಿಯೊಗಳನ್ನು ಹಂಚಿಕೊಂಡ ಇನ್‌ಸ್ಟಾಗ್ರಾಮ್ ಬಳಕೆದಾರರು ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News