×
Ad

ಸಾವರ್ಕರ್ ಕುರಿತು ಹೇಳಿಕೆ | ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಪ್ರಕರಣದಲ್ಲಿ ನಾಟಕೀಯ ತಿರುವು: ಪುಣೆ ನ್ಯಾಯಾಲಯಕ್ಕೆ ಸಲ್ಲಿಸಿದ ಸಿಡಿ ‘ಖಾಲಿ’!

Update: 2025-11-29 12:10 IST

ರಾಹುಲ್ ಗಾಂಧಿ (Photo: PTI)

ಪುಣೆ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆ ಗುರುವಾರ ನಾಟಕೀಯ ತಿರುವು ಪಡೆದುಕೊಂಡಿದೆ. ದೂರುದಾರರು ಪ್ರಮುಖ ಸಾಕ್ಷ್ಯವಾಗಿ ಸಲ್ಲಿಸಿದ್ದ ಸಿಡಿ ನ್ಯಾಯಾಲಯದಲ್ಲಿ ಪ್ಲೇ ಮಾಡಿದಾಗ ಅದು ಖಾಲಿಯಾಗಿದೆ ಎಂಬುದು ಬೆಳಕಿಗೆ ಬಂದಿದೆ.

ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ವಿನಾಯಕ ದಾಮೋದರ್ ಸಾವರ್ಕರ್ ಅವಹೇಳನ ಮಾಡಿದ್ದಾರೆ ಎಂಬ ಆರೋಪದ ಮೇಲೆ ಸಾವರ್ಕರ್ ಸೋದರಳಿಯ ಸತ್ಯಕಿ ಸಾವರ್ಕರ್ ಮಾನನಷ್ಟ ಮೊಕದ್ದಮೆ ಸಲ್ಲಿಸಿದ್ದರು. ಈ ಮೊಕದ್ದಮೆಯನ್ನು ಮ್ಯಾಜಿಸ್ಟ್ರೇಟ್ ಅಮೋಲ್ ಶಿಂಧೆ ವಿಚಾರಣೆ ನಡೆಸುತ್ತಿದ್ದಾರೆ.

ದೂರು ಸಲ್ಲಿಸಿದ ಬಳಿಕ ಮುಚ್ಚಿದ ಲಕೋಟೆಯಲ್ಲಿ ಪುರಾವೆಯಾಗಿ ಸಿಡಿ ಸಲ್ಲಿಸಲಾಗಿತ್ತು. ನ್ಯಾಯಾಲಯವು ಸಿಡಿಯನ್ನು ಪರಿಶೀಲಿಸಿತ್ತು. ಅದನ್ನೇ ಆಧರಿಸಿ ಗಾಂಧಿಗೆ ಸಮನ್ಸ್ ಹೊರಡಿಸಲಾಗಿತ್ತು. ಆದರೆ ಗುರುವಾರ ಸತ್ಯಕಿ ಸಾವರ್ಕರ್ ವಿಚಾರಣೆಯ ವೇಳೆ ಸಿಡಿಯನ್ನು ತೆರೆದು ಪ್ಲೇ ಮಾಡಿದಾಗ ಯಾವುದೇ ಡೇಟಾ ಇಲ್ಲದಿರುವುದು ಕಂಡುಬಂದಿದೆ.

ಈ ಬೆಳವಣಿಗೆ ದೂರುದಾರರ ಪರ ವಾದಿಸುತ್ತಿರುವ ವಕೀಲ ಸಂಗ್ರಾಮ್ ಕೊಲ್ಹತ್ಕರ್ ಅವರಿಗೆ ಆಘಾತ ತಂದಿದೆ. “ಈಗಾಗಲೇ ನ್ಯಾಯಾಲಯ ವೀಕ್ಷಿಸಿದ ಸಿಡಿ ಹೇಗೆ ಖಾಲಿಯಾಯಿತು?” ಎಂಬ ಪ್ರಶ್ನೆ ಉದ್ಭವಿಸಿದೆ.

ಸಿಡಿ ಖಾಲಿ ಇರುವ ಹಿನ್ನೆಲೆಯಲ್ಲಿ, YouTubeನಲ್ಲಿ ಲಭ್ಯವಿರುವ ವಿವಾದಾತ್ಮಕ ಭಾಷಣವನ್ನು ನೇರವಾಗಿ ವೀಕ್ಷಿಸಲು ಅನುಮತಿ ನೀಡುವಂತೆ ಕೊಲ್ಹತ್ಕರ್ ಮನವಿ ಮಾಡಿದರು. ಆದರೆ ರಾಹುಲ್ ಗಾಂಧಿಯವರ ಪರ ವಕೀಲ ಮಿಲಿಂದ್ ಪವಾರ್ ಬಲವಾಗಿ ಆಕ್ಷೇಪಿಸಿದರು.

ಮ್ಯಾಜಿಸ್ಟ್ರೇಟ್ ಶಿಂಧೆ ಅವರೂ ಆಕ್ಷೇಪಣೆಯನ್ನು ಅಂಗೀಕರಿಸಿ, “ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 65-B ಪ್ರಕಾರ ಪ್ರಮಾಣಪತ್ರವಿಲ್ಲದೆ URL ಅನ್ನು ಸಾಕ್ಷ್ಯವೆಂದು ಸ್ವೀಕರಿಸಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಕೊಲ್ಹತ್ಕರ್ ಅವರು ಬಳಿಕ ಇನ್ನೆರಡು ಸಿಡಿಗಳನ್ನು ಸಲ್ಲಿಸಿ ಅವನ್ನು ನ್ಯಾಯಾಲಯದಲ್ಲೇ ಪ್ಲೇ ಮಾಡುವಂತೆ ಒತ್ತಾಯಿಸಿದರು. ಪವಾರ್ ಅವರ ವಿರೋಧದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಈ ಮನವಿಯನ್ನೂ ತಿರಸ್ಕರಿಸಿದರು.

ಖಾಲಿಯಾದ ಸಿಡಿಯ ವಿಚಾರವಾಗಿ ನ್ಯಾಯಾಂಗ ತನಿಖೆಯನ್ನು ಪ್ರಾರಂಭಿಸಲು ವಿನಂತಿಸಿರುವ ಕೊಲ್ಹತ್ಕರ್ ಅವರ ಮನವಿಗೂ ಪವಾರ್ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮುಂದಿನ ವಿಚಾರಣೆ ಮುಂದಿನ ಶುಕ್ರವಾರಕ್ಕೆ ನಿಗದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News