×
Ad

ಐಷಾರಾಮಿ ವಾಹನ ಮುಟ್ಟುಗೋಲು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೊರೆ ಹೋದ ದುಲ್ಕರ್ ಸಲ್ಮಾನ್

Update: 2025-09-26 20:16 IST

ದುಲ್ಕರ್ ಸಲ್ಮಾನ್ | PC : X 

ತಿರುವನಂತಪುರಂ: ಅಕ್ರಮವಾಗಿ ಆಮದು ಮಾಡಿಕೊಳ್ಳಲಾದ ಕಾರುಗಳ ವಿರುದ್ಧದ ಅಭಿಯಾನದ ಭಾಗವಾಗಿ ಸುಂಕ ಇಲಾಖೆಯ ಅಧಿಕಾರಿಗಳು ತಮ್ಮ ಐಷಾರಾಮಿ ಕಾರನ್ನು ಮುಟ್ಟುಗೋಲು ಹಾಕಿಕೊಂಡಿರುವುದನ್ನು ಪ್ರಶ್ನಿಸಿ ನಟ ದುಲ್ಕರ್ ಸಲ್ಮಾನ್ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ನನ್ನ ಬಳಿಯಿರುವ ದಾಖಲೆಗಳನ್ನು ಸೂಕ್ತವಾಗಿ ಪರಿಶೀಲಿಸದೆ ಸುಂಕ ಇಲಾಖೆಯ ಅಧಿಕಾರಿಗಳು ಆತುರದ ಹಾಗೂ ನಿರಂಕುಶ ರೀತಿಯಲ್ಲಿ ಕ್ರಮ ಕೈಗೊಂಡಿದ್ದಾರೆ ಎಂದು ಹಿರಿಯ ನಟ ಮುಮ್ಮೂಟಿ ಅವರ ಪುತ್ರರೂ ಆದ ದುಲ್ಕರ್ ಸಲ್ಮಾನ್ ವಾದಿಸಿದ್ದಾರೆ.

ಸುಂಕ ಇಲಾಖೆಯ ಬಳಿ ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ನಿರ್ವಹಿಸಲು ಸೂಕ್ತ ಸೌಲಭ್ಯವಿಲ್ಲದೆ ಇರುವುದರಿಂದ, ತಮ್ಮ 2004ರ ಮಾದರಿಯ ಲ್ಯಾಂಡ್ ರೋವರ್ ಡಿಫೆಂಡರ್ ಕಾರಿಗೆ ಹಾನಿಯಾಗಬಹುದು. ಹೀಗಾಗಿ ನನ್ನ ವಾಹನವನ್ನು ಬಿಡುಗಡೆಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ವಾಹನಗಳ ಖರೀದಿಗೆ ಸಂಬಂಧಿಸಿದಂತೆ ನಾನು ಎಲ್ಲ ಪಾವತಿಗಳನ್ನೂ ಬ್ಯಾಂಕ್ ವಹಿವಾಟಿನ ಮೂಲಕ ಮಾಡಿದ್ದೇನೆ ಎಂದೂ ಅವರು ಹೇಳಿದ್ದಾರೆ.

ಸುಂಕವನ್ನು ತಪ್ಪಿಸಿ ಭೂತಾನ್ ನಿಂದ ಬಳಸಿದ ಕಾರುಗಳನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗಿದೆ ಎಂಬ ಆರೋಪದ ಮೇಲೆ ‘ಆಪರೇಷನ್ ನುಮ್ಖೂರ್’ ಹೆಸರಿನಲ್ಲಿ ಮಂಗಳವಾರದಿಂದ ಆರಂಭಿಸಲಾಗಿರುವ ಅಭಿಯಾನದಲ್ಲಿ ಸುಂಕ ಇಲಾಖೆಯು ಇದುವರೆಗೆ 38 ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ದುಲ್ಕರ್ ಸಲ್ಮಾನ್ ಅಲ್ಲದೆ, ನಟರಾದ ಪೃಥ್ವಿರಾಜ್ ಸುಕುಮಾರನ್ ಹಾಗೂ ಅಮಿತ್ ಚಕ್ಕಲಕ್ಕಲ್ ಮಾಲಕತ್ವದ ವಾಹನಗಳನ್ನೂ ಸುಂಕ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. ಭೂತಾನ್ ನಿಂದ ಕೇರಳಕ್ಕೆ ಸುಮಾರು 200 ಐಷಾರಾಮಿ ವಾಹನಗಳನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗಿದೆ ಎಂದು ಸುಂಕ ಇಲಾಖೆ ಶಂಕಿಸಿದೆ.

ಸೌಜನ್ಯ: deccanherald.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News