ದಟ್ಟ ಮಂಜು, ಮಾಲಿನ್ಯ, ಶೀತ ಗಾಳಿಯಿಂದ ಪೂರ್ವ ಮತ್ತು ಉತ್ತರ ಭಾರತ ತತ್ತರ
Photo credit : PTI
ಹೊಸದಿಲ್ಲಿ, ಡಿ.31: ಉತ್ತರ ಮತ್ತು ಪೂರ್ವ ಭಾರತದ ಹೆಚ್ಚಿನ ಭಾಗಗಳಲ್ಲಿ ಬುಧವಾರವೂ ತೀವ್ರ ಚಳಿ ಮುಂದುವರಿದಿದ್ದು, ದಟ್ಟ ಮಂಜು ಮತ್ತು ವಾಯುಮಾಲಿನ್ಯದಿಂದಾಗಿ ಹಲವಾರು ರಾಜ್ಯಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.
ಬುಧವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಯನ್ನು ದಟ್ಟ ಮಂಜು ಆವರಿಸಿದ್ದು, ವಾಯು ಗುಣಮಟ್ಟ ಕಳಪೆ ವರ್ಗದಲ್ಲಿಯೇ ಮುಂದುವರಿದಿದೆ. ಪಾಲಂ ಮತ್ತು ಸಫ್ದರ್‌ಜಂಗ್ ಪ್ರದೇಶಗಳಲ್ಲಿ ಬೆಳಿಗ್ಗೆ ಗೋಚರತೆ 50 ಮೀಟರ್‌ಗೆ ಕುಸಿದಿತ್ತು. ಕಡಿಮೆ ಗಾಳಿವೇಗಗಳು ಮತ್ತು ಕಳಪೆ ವಾತಾಯನ ಪರಿಸ್ಥಿತಿಗಳು ವಾಯುಮಾಲಿನ್ಯ ಹೆಚ್ಚಲು ಕಾರಣವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಪ ಸುಧಾರಣೆ ಕಂಡುಬರುವ ಮುನ್ನ, ಜ.1ರಂದು ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಇನ್ನಷ್ಟು ಹದಗೆಡುವ ನಿರೀಕ್ಷೆಯಿದೆ. ಕನಿಷ್ಠ ತಾಪಮಾನ 6.4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಹೊಸ ವರ್ಷದ ದಿನ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಪಶ್ಚಿಮ ಬಂಗಾಳದಾದ್ಯಂತ ಚಳಿ ತೀವ್ರಗೊಂಡಿದ್ದು, ಕೋಲ್ಕತಾದಲ್ಲಿ 11 ಡಿಗ್ರಿ ಸೆಲ್ಸಿಯಸ್‌ನಷ್ಟು ಋತುಮಾನದ ಕನಿಷ್ಠ ತಾಪಮಾನ ದಾಖಲಾಗಿದೆ. ದಾರ್ಜಿಲಿಂಗ್ ಅತ್ಯಂತ ಚಳಿಯ ಪ್ರದೇಶವಾಗಿದ್ದು, ಅಲ್ಲಿ ತಾಪಮಾನ 3.4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು.
ಇದೆಯಂತೆ ರಾಜಸ್ಥಾನ, ಅಸ್ಸಾಂ, ಪಂಜಾಬ್ ಮತ್ತು ಹರ್ಯಾಣಗಳಲ್ಲಿಯೂ ಶೀತ ಪರಿಸ್ಥಿತಿ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಹಲವಾರು ರಾಜ್ಯಗಳಲ್ಲಿ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.