ಪಶ್ಚಿಮ ಬಂಗಾಳ SIR| SSLC ಪ್ರವೇಶ ಪತ್ರ ಮಾನ್ಯ ದಾಖಲೆಯಾಗಿ ಸ್ವೀಕರಿಸುವಂತೆ ಕೋರಿದ್ದ ಪ್ರಸ್ತಾಪ ತಿರಸ್ಕರಿಸಿದ ಚುನಾವಣಾ ಆಯೋಗ
ಸಾಂದರ್ಭಿಕ ಚಿತ್ರ (PTI)
ಕೊಲ್ಕತ್ತಾ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಸಮಯದಲ್ಲಿ 10ನೇ ತರಗತಿ ಪ್ರವೇಶ ಪತ್ರವನ್ನು ಮಾನ್ಯ ದಾಖಲೆಯಾಗಿ ಸ್ವೀಕರಿಸುವಂತೆ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಭಾರತೀಯ ಚುನಾವಣಾ ಆಯೋಗ ಗುರುವಾರ ತಿರಸ್ಕರಿಸಿದೆ.
ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಕಳುಹಿಸಿದ ಪತ್ರದಲ್ಲಿ, ಭಾರತೀಯ ಚುನಾವಣಾ ಆಯೋಗ ಪ್ರಸ್ತಾವನೆಯನ್ನು ಪರಿಶೀಲಿಸಿರುವುದಾಗಿ ತಿಳಿಸಿದೆ. ಆದರೆ, ಎಸೆಸೆಲ್ಸಿ ಪ್ರವೇಶ ಪತ್ರ ಎಸ್ಐಆರ್ ಪ್ರಕ್ರಿಯೆಗೆ ಸೂಚಿಸಿದ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಲ್ಲಿಲ್ಲ ಎಂದು ಹೇಳಿದೆ.
ಪಶ್ಚಿಮ ಬಂಗಾಳದಲ್ಲಿ SIR ನಡೆಸಲು ಅಕ್ಟೋಬರ್ 27ರಂದು ಹೊರಡಿಸಿದ ಸೂಚನೆಗಳಲ್ಲಿ, ಮಾಧ್ಯಮಿಕ ಶಿಕ್ಷಣದ ಪ್ರವೇಶ ಪತ್ರವನ್ನು ಪರಿಶೀಲನಾ ಉದ್ದೇಶಗಳಿಗಾಗಿ ಮಾನ್ಯ ದಾಖಲೆಯಾಗಿ ಗುರುತಿಸಲಾಗಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
ಎಸ್ಐಆರ್ ಪ್ರಕ್ರಿಯೆಗೆ ಮಾನ್ಯವಾಗಿ ಚುನಾವಣಾ ಆಯೋಗ ಈ ಹಿಂದೆ 13 ದಾಖಲೆಗಳನ್ನು ಘೋಷಿಸಿತ್ತು. ಇವುಗಳಲ್ಲಿ ಕೇಂದ್ರ ಅಥವಾ ರಾಜ್ಯ ಸರಕಾರಿ ಉದ್ಯೋಗಿ ಅಥವಾ ಪಿಂಚಣಿದಾರರಿಗೆ ನೀಡಲಾದ ಗುರುತಿನ ಚೀಟಿ, 1987ರ ಮೊದಲು ಅಂಚೆ ಕಚೇರಿಗಳು, ಬ್ಯಾಂಕ್‌ಗಳು, ಎಲ್ಐಸಿ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರ ನೀಡಿದ ದಾಖಲೆಗಳು, ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ರಾಜ್ಯ ಸರಕಾರಿ ಪ್ರಾಧಿಕಾರ ನೀಡಿದ ವಾಸ್ತವ್ಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಮನೆ ಹಂಚಿಕೆ ಪ್ರಮಾಣಪತ್ರ ಸೇರಿವೆ.
ಈ ಕುರಿತು ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್ ಬ್ಯಾರಕ್ ಪೋರ್ ಕ್ಷೇತ್ರದ ಸಂಸದ ಪಾರ್ಥ ಭೌಮಿಕ್, ಮಾಧ್ಯಮಿಕ ಶಿಕ್ಷಣ ಪ್ರಮಾಣ ಪತ್ರ ಮಾನ್ಯವಲ್ಲ ಅಂದರೆ ಯಾವುದು ಮಾನ್ಯ? ಸಾಧ್ಯವಾದಷ್ಟು ಹೆಚ್ಚು ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಏಕೈಕ ಉದ್ದೇಶದಿಂದಲೇ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.