×
Ad

ಗಣರಾಜ್ಯೋತ್ಸವ ದಿನಕ್ಕೆ ಯೂರೋಪಿಯನ್ ಒಕ್ಕೂಟ ಅಧ್ಯಕ್ಷ ಅತಿಥಿ; ಭಾರತ- ಇಯು ಶೃಂಗಸಭೆ

Update: 2026-01-16 07:00 IST

PC: timesofindia

ಹೊಸದಿಲ್ಲಿ: ಯೂರೋಪಿಯನ್ ಒಕ್ಕೂಟದ ಅಧ್ಯಕ್ಷ ಆಂಟೋನಿಯಾ ಲೂಯಿಸ್ ಸ್ಯಾಂಟೋಸ್ ಡ ಕೋಸ್ಟಾ ಮತ್ತು ಯೂರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲಿಯೆನ್ ಅವರು ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜತೆಗೆ ಉಭಯ ಮುಖಂಡರು ಭಾರತ- ಯೂರೋಪಿಯನ್ ಒಕ್ಕೂಟದ 16ನೇ ಶೃಂಗಸಭೆಯಲ್ಲೂ ಪಾಲ್ಗೊಳ್ಳುವರು.

ಜಾಗತಿಕ ಅನಿಶ್ಚಿತತೆ ಹಿನ್ನೆಲೆಯಲ್ಲಿ ಹಲವು ತಿಂಗಳುಗಳ ಕಠಿಣ ಪರಿಶ್ರಮದ ಬಳಿಕ ಯೂರೋಪಿಯನ್ ಒಕ್ಕೂಟ ಭಾರತದ ಜತೆಗೆ ಹೊಸ ಪ್ರಮುಖ ಪಾಲುದಾರಿಕೆ ಒಪ್ಪಂದ ಮಾಡಿಕೊಳ್ಳುವ ಕಾರ್ಯಸೂಚಿಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಈ ಭೇಟಿ ವಿಶೇಷ ಮಹತ್ವ ಪಡೆದಿದೆ. ಪ್ರಸ್ತುತ ಉಭಯ ಬಣಗಳು ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ವಿಚಾರದಲ್ಲಿ ಕುಂಟುತ್ತಾ ಸಾಗಿವೆ. ಈ ವಿಷಯ ಶೃಂಗಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದೆ. ಜತೆಗೆ ಉಭಯ ದೇಶಗಳು ರಕ್ಷಣೆ ಮತ್ತ ಭದ್ರತಾ ಪಾಲುದಾರಿಕೆ ಮಾಡಿಕೊಳ್ಳುವ ಬಗ್ಗೆಯೂ ಚರ್ಚೆನಡೆಯಲಿದೆ. ರಷ್ಯಾ ಜತೆಗೆ ಭಾರತ ಸಂಬಂಧ ಹೊಂದಿರುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದ್ದರೂ, ರಕ್ಷಣಾ ಉದ್ಯಮದಲ್ಲಿ ಪರಸ್ಪರ ಸಹಕಾರ ಕುರಿತು ಕೂಡಾ ಚರ್ಚೆ ನಡೆಯಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಯೂರೋಪಿಯನ್ ಒಕ್ಕೂಟದ ಮೂಲಗಳ ಪ್ರಕಾರ, ವ್ಯಾಪಾರ, ಭದ್ರತೆ, ರಕ್ಷಣೆ, ಸ್ವಚ್ಛ ಸಾರಿಗೆ ಮತ್ತು ಉಭಯ ದೇಶಗಳ ನಡುವಿನ ಜನರ ನಡುವಿನ ಸಂಬಂಧ ಚರ್ಚೆಗಳ ಪ್ರಮುಖ ಕಾರ್ಯಸೂಚಿಯಾಗಿದೆ. "ನಿಯಮಾಧರಿತ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಸಂರಕ್ಷಿಸುವ ಸಲುವಾಗಿ ನಮ್ಮ ಸಾಮಥ್ರ್ಯ ಮತ್ತು ಹೊಣೆಗಾರಿಕೆಯನ್ನು ಹಂಚಿಕೊಳ್ಳುವುದು ನಮ್ಮ ಉದ್ದೇಶ" ಎಂದು ಕೋಸ್ಟಾ ಸ್ಪಷ್ಟಪಡಿಸಿದ್ದಾರೆ.

ಯೂರೋಪಿಯನ್ ಒಕ್ಕೂಟದ ಮುಖಂಡರು ಭಾರತದ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳುವುದು ಇದೇ ಮೊದಲು. 27 ದೇಶಗಳ ಒಕ್ಕೂಟದ ಜತೆಗೆ ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗುವ ನಿರೀಕ್ಷೆ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News