ದೇಶದಾದ್ಯಂತ 334 ಪಕ್ಷಗಳನ್ನು ಕೈಬಿಟ್ಟ ಚುನಾವಣಾ ಆಯೋಗ; ಕರ್ನಾಟಕದ 12 ಪಕ್ಷಗಳೂ ಪಟ್ಟಿಯಲ್ಲಿ
ಹೊಸದಿಲ್ಲಿ: ದೇಶದಾದ್ಯಂತ ನಿಷ್ಕ್ರಿಯವಾಗಿದ್ದ 334 ನೋಂದಾಯಿತ, ಆದರೆ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ಚುನಾವಣಾ ಆಯೋಗ ಶನಿವಾರ ತನ್ನ ಪಟ್ಟಿಯಿಂದ ಕೈಬಿಟ್ಟಿದೆ. ಈ ಪಟ್ಟಿಯಲ್ಲಿ ಕರ್ನಾಟಕದ 12 ಪಕ್ಷಗಳೂ ಸೇರಿವೆ.
ಚುನಾವಣಾ ಆಯೋಗದ ಪ್ರಕಾರ, 2019ರಿಂದ ಕಳೆದ ಆರು ವರ್ಷಗಳಲ್ಲಿ ಈ ಪಕ್ಷಗಳು ಒಂದೇ ಒಂದು ಚುನಾವಣೆಯಲ್ಲೂ ಸ್ಪರ್ಧಿಸಿಲ್ಲ. ಜೊತೆಗೆ, ನೋಂದಾಯಿತ ವಿಳಾಸದಲ್ಲೂ ಅವುಗಳ ಕಚೇರಿ ಪತ್ತೆಯಾಗದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.
ಈ ಪಟ್ಟಿಯಲ್ಲಿ ಕರ್ನಾಟಕದ 12 ಪಕ್ಷಗಳೂ ಇವೆ. ಅಂಬೇಡ್ಕರ್ ಜನತಾ ಪಕ್ಷ, ಭಾರತೀಯ ಪ್ರಜಾ ಪಕ್ಷ, ಜನ ಸ್ವರಾಜ್ಯ ಪಕ್ಷ, ಕಲ್ಯಾಣ ಕ್ರಾಂತಿ ಪಕ್ಷ, ಕರ್ನಾಟಕ ಪ್ರಜಾ ವಿಕಾಸ್ ಪಕ್ಷ, ಕರ್ನಾಟಕ ಸ್ವರಾಜ್ಯ ಪಕ್ಷ, ಮಹಿಳಾ ಪ್ರಧಾನ ಪಕ್ಷ, ನಮ್ಮ ಕಾಂಗ್ರೆಸ್, ಪ್ರಜಾ ರೈತ ರಾಜ್ಯ ಪಕ್ಷ, ರಕ್ಷಕ ಸೇನಾ, ಸಮನ್ಯಾ ಜನತಾ ಪಕ್ಷ (ಲೋಕ ತಾಂತ್ರಿಕ್), ವಿಚಾರ ಜಾಗೃತಿ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗ ಕೈಬಿಟ್ಟ ಕರ್ನಾಟಕದ ಪಕ್ಷಗಳು.
ಬಿಹಾರದಲ್ಲಿ 17 ಪಕ್ಷಗಳು, ಉತ್ತರ ಪ್ರದೇಶದಲ್ಲಿ 115, ದಿಲ್ಲಿಯಲ್ಲಿ 27, ತಮಿಳುನಾಡಿನಲ್ಲಿ 22, ಹರ್ಯಾ ದಲ್ಲಿ 21, ಮಧ್ಯಪ್ರದೇಶದಲ್ಲಿ 15, ತೆಲಂಗಾಣದಲ್ಲಿ 13 ಹಾಗೂ ಗುಜರಾತ್ ನಲ್ಲಿ 11 ಪಕ್ಷಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಈ ಕ್ರಮದ ನಂತರ ದೇಶದಲ್ಲಿ ಅಸ್ತಿತ್ವದಲ್ಲಿದ್ದ 2,854 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಪೈಕಿ 2,520 ಪಕ್ಷಗಳು ಮಾತ್ರ ಉಳಿದಿವೆ. ಪ್ರಸ್ತುತ ದೇಶದಲ್ಲಿ 6 ರಾಷ್ಟ್ರೀಯ ಪಕ್ಷಗಳು ಹಾಗೂ 67 ರಾಜ್ಯ ಪಕ್ಷಗಳಿವೆ.
ಈ ಪಕ್ಷಗಳ ಕೈಬಿಡುವಿಕೆಯಿಂದ ಅವುಗಳಿಗಿದ್ದ ದೇಣಿಗೆ ಸ್ವೀಕರಿಸುವ ಹಕ್ಕು ಹಾಗೂ ಆದಾಯ ತೆರಿಗೆಯ ವಿನಾಯಿತಿ ರದ್ದಾಗಿದೆ. ಹಣ ಅಕ್ರಮ ವರ್ಗಾವಣೆ ತಡೆಗಟ್ಟುವಿಕೆ ಕಾಯ್ದೆ ಮತ್ತು ಆದಾಯ ತೆರಿಗೆ ಕಾಯ್ದೆಗಳ ಉಲ್ಲಂಘನೆ ಕೂಡಾ ಬಹುತೇಕ ಪ್ರಕರಣಗಳಲ್ಲಿ ಕಂಡುಬಂದಿದೆ ಎಂದು ಚುನಾವಣಾ ಆಯೋಗವು ಹೇಳಿದೆ.
ಕಳೆದ ಜೂನ್‌ನಲ್ಲಿ 345 ಪಕ್ಷಗಳ ವಿಚಾರಣೆ ನಡೆಸಿ, ನಿಯಮ ಉಲ್ಲಂಘನೆ ಮಾಡಿದ 334 ಪಕ್ಷಗಳನ್ನು ಕೈಬಿಡಲು ಚುನಾವಣಾ ಆಯೋಗ ತೀರ್ಮಾನಿಸಿತ್ತು. 11 ಪಕ್ಷಗಳ ಕಾರ್ಯವೈಖರಿಯನ್ನು ಮರುಪರಿಶೀಲಿಸಲು ಸಂಬಂಧಿತ ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ.
ಆಯೋಗದ ಪ್ರಕಾರ, ನಿಷ್ಕ್ರಿಯ ರಾಜಕೀಯ ಪಕ್ಷಗಳ ಪಟ್ಟಿಯನ್ನು 2001ರಿಂದ ಮೂರರಿಂದ ನಾಲ್ಕು ಬಾರಿ ಪರಿಷ್ಕರಿಸಲಾಗಿದೆ ಮತ್ತು ಇದು ನಿರಂತರ ಪ್ರಕ್ರಿಯೆಯಾಗಿದೆ.
ಪಟ್ಟಿಯಿಂದ ಕೈಬಿಡುವ ಮುನ್ನ ಈ ರಾಜಕೀಯ ಪಕ್ಷಗಳಿಗೆ ಅವುಗಳ ಮೇಲಿರುವ ಆರೋಪಗಳ ಕುರಿತು ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು ಎಂದು ಚುನಾವಣಾ ಆಯೋಗವು ತಿಳಿಸಿದೆ.