ಅರ್ಥಶಾಸ್ತ್ರಜ್ಞೆ ಜಯತಿ ಘೋಷ್‌ಗೆ ಪ್ರತಿಷ್ಠಿತ ಗಲ್‌ಬ್ರೈಥ್ ಪ್ರಶಸ್ತಿ ಪ್ರದಾನ
Dr. Jayati Ghosh (Twitter)
ಹೊಸದಿಲ್ಲಿ: ಹೆಸರಾಂತ ಅಭಿವೃದ್ಧಿ ಅರ್ಥಶಾಸ್ತ್ರಜ್ಞೆ ಹಾಗೂ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಜಯತಿ ಘೋಷ್ ಅವರಿಗೆ ಅಗ್ರಿಕಲ್ಚರ್ ಆ್ಯಂಡ್ ಇಕೊನೊಮಿಕ್ಸ್ ಸೋಸಿಯೇಶನ್ (AAEA) ಬುಧವಾರ ಪ್ರತಿಷ್ಠಿತ ಗಲ್‌ಬ್ರೈಥ್ ಪ್ರಶಸ್ತಿ ಪ್ರದಾನ ಮಾಡಿದೆ.
ಈ ಪ್ರಶಸ್ತಿಯನ್ನು ಮಾರ್ಚ್ ಆರಂಭದಲ್ಲಿ ಘೋಷಿಸಲಾಗಿತ್ತು ಹಾಗೂ ಬುಧವಾರ ಔಪಚಾರಿಕವಾಗಿ ಪ್ರದಾನ ಮಾಡಲಾಯಿತು. ಜಯತಿ ಘೋಷ್ ಅವರು ಪ್ರಸಕ್ತ ಮೆಸೆಚುಸೆಟ್ಸ್ ಅಮ್‌ಹೆರ್ಸ್ಟ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕಾರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರ್ಥಶಾಸ್ತ್ರದಲ್ಲಿ ಮಹತ್ವದ ಅನ್ವೇಷಣೆ ಹಾಗೂ ನಾಯಕತ್ವ, ಸಂಶೋಧನೆ, ಸೇವೆಯ ಮೂಲಕ ಮಾನವತೆಗೆ ನೀಡಿದ ಪ್ರಮುಖ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಶಸ್ತಿಯಲ್ಲಿ ಉಲ್ಲೇಖಿಸಲಾಗಿದೆ.
ದೇಶ ಹಾಗೂ ಜಗತ್ತಿಗೆ ಸೇವೆ ನೀಡುವುದರೊಂದಿಗೆ ಬೌದ್ಧಿಕ ನಾಯಕತ್ವ ನೀಡಿರುವ ಜೆ.ಕೆ. ಗಲ್‌ಬ್ರೈಥ್‌ನಂತಹ ವಿದ್ವಾಂಸರು ಹಾಗೂ ನಾಯಕರನ್ನು ಗುರುತಿಸುವುದು ಈ ಪ್ರಶಸ್ತಿ ನೀಡುವುದರ ಉದ್ದೇಶ ಎಂದು ಎಎಇಎ ಟ್ರಸ್ಟ್ ಹೇಳಿದೆ.