×
Ad

ರಾಬರ್ಟ್ ವಾದ್ರಾ ವಿರುದ್ಧ ಈಡಿ ದೋಷಾರೋಪ: ರಾಜಕೀಯ ದ್ವೇಷ ಸಾಧನೆಯ ಮುಂದುವರಿಕೆ ಎಂದ ರಾಹುಲ್ ಗಾಂಧಿ

Update: 2025-07-18 17:27 IST

ರಾಬರ್ಟ್ ವಾದ್ರಾ ,  ರಾಹುಲ್ ಗಾಂಧಿ | PTI

ಹೊಸದಿಲ್ಲಿ: ಜಾರಿ ನಿರ್ದೇಶನಾಲಯ(ಈ.ಡಿ.)ವು ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣದಲ್ಲಿ ತನ್ನ ಸೋದರಿಯ ಪತಿ ರಾಬರ್ಟ್ ವಾದ್ರಾ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿರುವುದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ರಾಜಕೀಯ ದ್ವೇಷ ಸಾಧನೆಯ ಭಾಗವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶುಕ್ರವಾರ ಹೇಳಿದ್ದಾರೆ.

ಈ.ಡಿ.ಗುರುವಾರ 2008ರಲ್ಲಿ ಹರ್ಯಾಣದ ಶಿಕೋಹಪುರದಲ್ಲಿ ನಡೆದಿದ್ದ ಭೂ ವ್ಯವಹಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿಯವರ ಪತಿ ವಾದ್ರಾರನ್ನು ಆರೋಪಿಯನ್ನಾಗಿ ಹೆಸರಿಸಿದ್ದು, ಅವರಿಗೆ ಮತ್ತು ಅವರ ಸಂಸ್ಥೆಗಳಿಗೆ ಸಂಬಂಧಿಸಿದ 43 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿಕೊಂಡಿದೆ.

ಈ ಸರಕಾರವು ಕಳೆದ ಹತ್ತು ವರ್ಷಗಳಿಂದಲೂ ವಾದ್ರಾರನ್ನು ಬೇಟೆಯಾಡುತ್ತಿದೆ. ಇತ್ತೀಚಿನ ಈ ದೋಷಾರೋಪ ಪಟ್ಟಿಯು ದ್ವೇಷ ಸಾಧನೆಯ ಮುಂದುವರಿಕೆಯಾಗಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿರುವ ರಾಹುಲ್,‘ವಾದ್ರಾ,ಪ್ರಿಯಾಂಕಾ ಮತ್ತು ಅವರ ಮಕ್ಕಳು ಇನ್ನೊಂದು ದುರುದ್ದೇಶಪೂರಿತ, ರಾಜಕೀಯ ಪ್ರೇರಿತ ಅಪನಿಂದೆ ಮತ್ತು ಕಿರುಕುಳದ ದಾಳಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ನಾನು ಅವರ ಜೊತೆಯಲ್ಲಿದ್ದೇನೆ’ ಎಂದು ತಿಳಿಸಿದ್ದಾರೆ.

ತನ್ನ ಕುಟುಂಬವು ಯಾವುದೇ ರೀತಿಯ ಕಿರುಕುಳವನ್ನು ತಡೆದುಕೊಳ್ಳುವಷ್ಟು ಧೈರ್ಯಶಾಲಿಯಾಗಿದೆ ಎಂಬ ನಂಬಿಕೆ ತನಗಿದೆ ಎಂದಿರುವ ಅವರು,ಅಂತಿಮವಾಗಿ ಸತ್ಯವು ಮೇಲುಗೈ ಸಾಧಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ವಾದ್ರಾ ವಿರುದ್ಧ ಈ.ಡಿ.ದೋಷಾರೋಪ ಪಟ್ಟಿಯು ಕ್ರಿಮಿನಲ್ ಪ್ರಕರಣವೊಂದರಲ್ಲಿ ಅವರ ವಿರುದ್ಧ ಸಲ್ಲಿಸಲಾಗಿರುವ ಮೊದಲ ಪ್ರಾಸಿಕ್ಯೂಷನ್ ದೂರು ಆಗಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ

ಗುರುವಾರ ಪ್ರಕರಣವನ್ನು ನರೇಂದ್ರ ಮೋದಿ ಸರಕಾರದ ಸೇಡಿನ ಕ್ರಮ ಎಂದು ಬಣ್ಣಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ,ಶಿಕೋಹಪುರ ಭೂವ್ಯವಹಾರದಲ್ಲಿ ಅಕ್ರಮದ ಲವಲೇಶವೂ ಇಲ್ಲ ಎಂದು ಹೇಳಿದ್ದರು.

ಈ ಪ್ರಕರಣದಲ್ಲಿ 3.5 ಎಕರೆ ಭೂಮಿಯ ಖರೀದಿ ಮತ್ತು ಮಾರಾಟ ಯಾವಾಗಿನಿಂದ ಅಕ್ರಮ ಅಥವಾ ಅಪರಾಧವಾಯಿತು ಎಂದು ಅವರು ಪ್ರಶ್ನಿಸಿದ್ದರು.

ವಾದ್ರಾ ಅವರ ಕಚೇರಿಯೂ ,ಈ.ಡಿ.ಪ್ರಕರಣವು ಪ್ರಸ್ತುತ ಸರಕಾರದ ರಾಜಕೀಯ ಬೇಟೆಯ ವಿಸ್ತರಣೆಯಲ್ಲದೆ ಬೇರೇನೂ ಅಲ್ಲ ಎಂದು ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News