500 ಕೋಟಿ ರೂ. ವೈದ್ಯಕೀಯ ಉಪಕರಣಗಳ ಸರಬರಾಜು ಹಗರಣ | ಚತ್ತೀಸ್ಗಢದ ವಿವಿಧ ಸ್ಥಳಗಳಲ್ಲಿ ಈಡಿ ದಾಳಿ
ರಾಯಪುರ, ಜು. 30: 500 ಕೋಟಿ ರೂ.ಗೂ ಅಧಿಕ ಮೌಲ್ಯದ ವೈದ್ಯಕೀಯ ಉಪಕರಣ ಮತ್ತು ಕಾರಕ ಸರಬರಾಜು ಹಗರಣದ ಕುರಿತು ನಡೆಯುತ್ತಿರುವ ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಚತ್ತೀಸ್ಗಢದ ಹಲವು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ(ಈಡಿ) ಬುಧವಾರ ದಾಳಿ ನಡೆಸಿದೆ.
ಸರಕಾರದ ಕೆಲವು ಅಧಿಕಾರಿಗಳು, ವೈದ್ಯಕೀಯ ಉಪಕರಣ, ಕಾರಕ ಸರಬರಾಜುದಾರರು, ಏಜೆಂಟರು ಹಾಗೂ ಮಧ್ಯವರ್ತಿಗಳಿಗೆ ನಂಟು ಹೊಂದಿದೆ ರಾಯಪುರ ಹಾಗೂ ಸಮೀಪದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಬೊಕ್ಕಸಕ್ಕೆ 550 ಕೋ.ರೂ. ನಷ್ಟಕ್ಕೆ ಕಾರಣವಾದ 2023ರ ವೈದ್ಯಕೀಯ ಉಪಕರಣ ಹಾಗೂ ಕಾರಕಗಳ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪದಲ್ಲಿ 6 ಮಂದಿಯ ವಿರುದ್ಧ ಎಪ್ರಿಲ್ ನಲ್ಲಿ ಭ್ರಷ್ಟಾಚಾರ ನಿಯಂತ್ರಣ ದಳ ಹಾಗೂ ಆರ್ಥಿಕ ಅಪರಾಧಗಳ ದಳ (ಎಸಿಬಿ/ಇಒಡಬ್ಲ್ಯು) ದಾಖಲಿಸಿದ ಆರೋಪ ಪಟ್ಟಿಯ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ತನಿಖೆ ನಡೆಸುತ್ತಿದೆ.
ಎಸಿಬಿ/ಇಒಡಬ್ಲ್ಯು ಜನವರಿ 22ರಂದು ರಾಜ್ಯ ಸರಕಾರ ನಡೆಸುತ್ತಿರುವ ರಾಯಪುರದಲ್ಲಿರುವ ಚತ್ತೀಸ್ಗಡ ಮೆಡಿಕಲ್ ಸರ್ವೀಸಸ್ ಕಾರ್ಪೊರೇಷನ್ ಲಿಮಿಟೆಡ್ (ಸಿಜಿಎಂಎಸ್ಸಿಎಲ್)ನ ಅಧಿಕಾರಿಗಳು, ಆರೋಗ್ಯ ಸೇವೆಗಳ ಇಲಾಖೆಯ ನಿರ್ದೇಶನಾಲಯ ಹಾಗೂ ಮೋಕ್ಷಿತ್ ಕಾರ್ಪೊರೇಷನ್ (ಔಷಧ), ಸಿ.ಬಿ. ಕಾರ್ಪೊರೇಷನ್ (ಔಷಧ), ರೆಕಾರ್ಡ್ಸ್ ಆ್ಯಂಡ್ ಮೆಡಿಕೇರ್ ಸಿಸ್ಟಮ್ ಎಚ್ಎಸ್ಐಐಡಿಸಿ (ಪಂಚಕುಲ, ಹರ್ಯಾಣ), ಶ್ರೀ ಶಾರದಾ ಇಂಡಸ್ಟ್ರೀಸ್ (ರಾಯಪುರ) ಹಾಗೂ ಇತರ ಕಂಪೆನಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು.
ಆರೋಗ್ಯ ಕೇಂದ್ರಗಳಲ್ಲಿ ಈ ವಸ್ತುಗಳ ಅಗತ್ಯತೆ/ಲಭ್ಯತೆಯನ್ನು ಪರಿಶೀಲಿಸದೆ ಕಾರಕ ಹಾಗೂ ಉಪಕರಣಗಳನ್ನು ಖರೀದಿಸಿದ ಹಗರಣ ಇದಾಗಿದೆ.