'ನಕಲಿ' ಬ್ಯಾಂಕ್ ಗ್ಯಾರಂಟಿ ಪ್ರಕರಣ| ಅಂಬಾನಿ ಒಡೆತನದ ರಿಲಯನ್ಸ್ ಪವರ್, ಇತರ ಅಂಗಸಂಸ್ಥೆಗಳ ವಿರುದ್ಧ ಈಡಿ ಚಾರ್ಜ್‌ಶೀಟ್
ಅನಿಲ್ ಅಂಬಾನಿ (Photo: PTI)
ಹೊಸದಿಲ್ಲಿ: 68 ಕೋಟಿ ರೂಪಾಯಿ ಮೌಲ್ಯದ ನಕಲಿ ಬ್ಯಾಂಕ್ ಗ್ಯಾರಂಟಿ ನೀಡಿ ಟೆಂಡರ್ ಪಡೆದ ಆರೋಪಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಉದ್ಯಮಿ ಅನಿಲ್ ಅಂಬಾನಿ ಅವರ ರಿಲಯನ್ಸ್ ಪವರ್ ಲಿಮಿಟೆಡ್ ಮತ್ತು ಇತರ 10 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ರಿಲಯನ್ಸ್ ಪವರ್ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಕುಮಾರ್ ಪಾಲ್, ರಿಲಯನ್ಸ್ ಎನ್ಯು ಬಿಇಎಸ್ಎಸ್ ಲಿಮಿಟೆಡ್ ಮತ್ತು ರೋಸಾ ಪವರ್ ಸಪ್ಲೈ ಕಂಪೆನಿ ಲಿಮಿಟೆಡ್, ರಿಲಯನ್ಸ್ ಗ್ರೂಪ್ ಕಾರ್ಯನಿರ್ವಾಹಕ ಅಧಿಕಾರಿ ಪುನೀತ್ ನರೇಂದ್ರ ಗಾರ್ಗ್, ಒಡಿಶಾ ಮೂಲದ ಕಂಪೆನಿ ಬಿಸ್ವಾಲ್ ಟ್ರೇಡ್ಲಿಂಕ್ ಪ್ರೈವೇಟ್ ಲಿಮಿಟೆಡ್, ಅದರ ಎಂಡಿ ಪಾಥ ಸಾರಥಿ ಬಿಸ್ವಾಲ್ ಮತ್ತು ಹಣಕಾಸು ಸಲಹೆಗಾರ ಅಮರ್ ನಾಥ್ ದತ್ತಾ ಹೆಸರನ್ನು ಪ್ರಾಸಿಕ್ಯೂಷನ್ ದೂರಿನಲ್ಲಿ ಉಲ್ಲೇಖಿಸಿದೆ.
ತನಿಖಾ ಸಂಸ್ಥೆಯ ಪ್ರಕಾರ, ಬಯೋಥೇನ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್, ರವೀಂದರ್ ಪಾಲ್ ಸಿಂಗ್ ಚಾಧಾ ಮತ್ತು ಮನೋಜ್ ಭಯ್ಯಾಸಾಹೇಬ್, ಪೊಂಗ್ಡೆ ಕೂಡ ಆರೋಪಿಗಳಲ್ಲಿ ಸೇರಿದ್ದಾರೆ.
ಶುಕ್ರವಾರ ದಿಲ್ಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಅಕ್ರಮ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಿಲಯನ್ಸ್ ಪವರ್ ಅಂಗ ಸಂಸ್ಥೆಯಾದ ರಿಲಯನ್ಸ್ ಎನ್ಯು ಬಿಇಎಸ್ಎಸ್ ಲಿಮಿಟೆಡ್ ಪರವಾಗಿ ಭಾರತೀಯ ಸೌರ ಇಂಧನ ನಿಗಮಕ್ಕೆ 68.2 ಕೋಟಿ ರೂ. ಮೌಲ್ಯದ ಬ್ಯಾಂಕ್ ಗ್ಯಾರಂಟಿ ನೀಡಿದ್ದು, ಅದು ನಕಲಿ ಎಂಬ ಆರೋಪ ಅಶೋಕ್ ಪಾಲ್ ಮೇಲಿದೆ. ಈ ಕಂಪನಿಯನ್ನು ಈ ಹಿಂದೆ ಮಹಾರಾಷ್ಟ್ರ ಎನರ್ಜಿ ಜನರೇಷನ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು.
ಇದು ನಕಲಿ ಬ್ಯಾಂಕ್ ಗ್ಯಾರಂಟಿ ಎಂದು ರಿಲಯನ್ಸ್ ಗ್ರೂಪ್ ಅಧಿಕಾರಿಗಳಿಗೆ ಚೆನ್ನಾಗಿ ತಿಳಿದಿತ್ತು ಎಂದು ತನಿಖಾಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.