ದಿಲ್ಲಿ ಸಚಿವ ರಾಜ್ ಕುಮಾರ್ ಆನಂದ್ ನಿವಾಸದ ಮೇಲೆ ಈಡಿ ದಾಳಿ
ದಿಲ್ಲಿ ಸಚಿವ ರಾಜ್ ಕುಮಾರ್ ಆನಂದ್ (Image: aamaadmiparty.org)
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿಯ ಸಮಾಜ ಕಲ್ಯಾಣ ಸಚಿವ ರಾಜ್ ಕುಮಾರ್ ಆನಂದ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಈಡಿ) ದಾಳಿ ನಡೆಸಿದೆ. ಈಡಿ ತಂಡವೊಂದು ಇಂದು (ಗುರುವಾರ) ಬೆಳಗ್ಗೆ ಸಚಿವರ ಮನೆಗೆ ತೆರಳಿ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದೆ ಎಂದು ndtv.com ವರದಿ ಮಾಡಿದೆ.
ಅರವಿಂದ್ ಕೇಜ್ರಿವಾಲ್ ಅವರ ಸಂಪುಟದಲ್ಲಿ ಸಚಿವರಾಗಿರುವ ರಾಜ್ ಕುಮಾರ್ ಆನಂದ್, ಪಟೇಲ್ ನಗರದ ಶಾಸಕರಾಗಿದ್ದಾರೆ. ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳಿಂದ ಹಲವಾರು ಆಪ್ ನಾಯಕರು ತನಿಖೆಗೆ ಒಳಪಟ್ಟ ನಂತರ, ಕೇಂದ್ರ ತನಿಖಾ ಸಂಸ್ಥೆಗಳ ಕಣ್ಗಾವಲಿಗೆ ಒಳಪಟ್ಟಿರುವ ಆಪ್ ನ ಹೊಸ ನಾಯಕ ರಾಜ್ ಕುಮಾರ್ ಆನಂದ್ ಆಗಿದ್ದಾರೆ.
ಅಂತಾರಾಷ್ಟ್ರೀಯ ಹವಾಲಾ ವಹಿವಾಟಿನೊಂದಿಗೆ ರೂ. 7 ಕೋಟಿಗೂ ಹೆಚ್ಚು ಸುಂಕವನ್ನು ತಪ್ಪಿಸಲು ಸುಳ್ಳು ಆಮದು ಪ್ರಮಾಣ ಘೋಷಣೆ ಮಾಡಿದ್ದಾರೆ ಎಂಬ ಆರೋಪದ ಕುರಿತು ಈ ತನಿಖೆ ನಡೆಯುತ್ತಿದೆ. ರಾಜ್ ಕುಮಾರ್ ಆನಂದ್ ವಿರುದ್ಧ ಜಾರಿ ನಿರ್ದೇಶನಾಲಯವು ದೂರು ದಾಖಲಿಸಿಕೊಂಡ ನಂತರ, ಕಂದಾಯ ಗುಪ್ತಚರ ನಿರ್ದೇಶನಾಲವು ದಾಖಲಿಸಿದ್ದ ದೂರನ್ನು ಸ್ಥಳೀಯ ನ್ಯಾಯಾಲಯವೊಂದು ಗಣನೆಗೆ ತೆಗೆದುಕೊಂಡಿದೆ.
ರಾಜ್ ಕುಮಾರ್ ಆನಂದ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿರುವುದನ್ನು ಖಂಡಿಸಿರುವ ದಿಲ್ಲಿ ಸಚಿವ ಸೌರಭ್ ಭಾರದ್ವಾಜ್, ರಾಜ್ ಕುಮಾರ್ ಆನಂದ್ ಅವರ ಒಂದೇ ತಪ್ಪೆಂದರೆ ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರಿರುವುದು ಎಂದು ಹೇಳಿದ್ದಾರೆ.
ಈ ನಡುವೆ, INDIA ಮೈತ್ರಿಕೂಟದ ಹಲವಾರು ಸದಸ್ಯರು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿಗೊಳಿಸಿರುವುದನ್ನು ಖಂಡಿಸಿದ್ದು, ಈ ನಡೆಯು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ. ಆಮ್ ಆದ್ಮಿ ಪಕ್ಷವು INDIA ಮೈತ್ರಿಕೂಟದ ಅಂಗಪಕ್ಷವಾಗಿದೆ.