×
Ad

35 ವರ್ಷಗಳಿಂದ ಚುನಾವಣಾ ಆಯೋಗವನ್ನು ಬೆಂಬಲಿಸುತ್ತಿದ್ದೆ; ರಾಹುಲ್ ಗಾಂಧಿಯ ಪುರಾವೆಯು ಚಿತ್ರಣವನ್ನೇ ಬದಲಿಸಿದೆ: ಯೋಗೇಂದ್ರ ಯಾದವ್

Update: 2025-08-08 20:18 IST

ಯೋಗೇಂದ್ರ ಯಾದವ್ | PTI

ಹೊಸದಿಲ್ಲಿ, ಆ. 8: ನಾನು ದಶಕಗಳಿಂದ ಭಾರತೀಯ ಚುನಾವಣಾ ಪ್ರಕ್ರಿಯೆಯನ್ನು ಸಮರ್ಥಿಸುತ್ತಾ ಬಂದಿದ್ದೇನೆ ಹಾಗೂ ‘‘ನಮ್ಮ ಚುನಾವಣಾ ಆಯೋಗವನ್ನು ನೋಡಿ ಕಲಿಯಿರಿ’’ ಎಂಬುದಾಗಿ ಜಗತ್ತಿಗೆ ಹೇಳುತ್ತಾ ಬಂದಿದ್ದೇನೆ ಎಂದು ರಾಜಕೀಯ ಕಾರ್ಯಕರ್ತ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ಮುಖ್ಯಸ್ಥ ಯೋಗೇಂದ್ರ ಯಾದವ್ ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಮುಂದಿಟ್ಟಿರುವ ಪುರಾವೆಯು ಈ ಚಿತ್ರಣವನ್ನೇ ಬದಲಿಸಿದೆ ಎಂಬ ಖೇದವನ್ನು ಅವರು ವ್ಯಕ್ತಪಡಿಸಿದ್ದಾರೆ.

ಭಾರತೀಯ ಚುನಾವಣಾ ಆಯೋಗವು ಆಡಳಿತಾರೂಢ ಬಿಜೆಪಿ ಪಕ್ಷದೊಂದಿಗೆ ಸೇರಿ ಆ ಪಕ್ಷಕ್ಕಾಗಿ ‘‘ಮತಗಳ್ಳತನ’’ದಲ್ಲಿ ತೊಡಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ರಾಹುಲ್ ಗಾಂಧಿ ಗುರುವಾರ ಹೊರಗೆಡವಿದ್ದಾರೆ. ಅದಕ್ಕಾಗಿ ದಾಖಲೆಗಳನ್ನೂ ಒದಗಿಸಿದ್ದಾರೆ.

ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ನಡೆದ ಚುನಾವಣೆಗಳಲ್ಲಿನ ಲೋಪದೋಷಗಳತ್ತ ಅವರು ಬೆಟ್ಟು ಮಾಡಿದ್ದಾರೆ. ‘‘ಒಂದು ಕೋಟಿ ನಿಗೂಢ ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ, ಸಿಸಿಟಿವಿ ದೃಶ್ಯಗಳನ್ನು ನಾಶಪಡಿಸಲಾಗಿದೆ. ಮತದಾರ ಪಟ್ಟಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ನೀಡಲು ಚುನಾವಣಾ ಆಯೋಗವು ನಿರಾಕರಿಸುತ್ತಿದೆ’’ ಎಂದು ಆರೋಪಿಸಿರುವ ಅವರು, ಇವು ಚುನಾವಣಾ ಆಯೋಗದ ಅಪ್ರಾಮಾಣಿಕತೆಯನ್ನು ಬಿಂಬಿಸುತ್ತವೆ ಎಂದು ಬಣ್ಣಿಸಿದ್ದಾರೆ.

‘‘ಕರ್ನಾಟಕದ ಕೇವಲ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ನಕಲಿ ಮತಗಳು; ಮತದಾರ ಪಟ್ಟಿಯ 15-29 ಶೇಕಡವೇ ನಕಲಿ’’ ಎಂದು ಎಕ್ಸ್ ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಯೋಗೇಂದ್ರ ಯಾದವ್ ಹೇಳಿದ್ದಾರೆ. ಚುನಾವಣಾ ಆಯೋಗವು ಪವಿತ್ರವಾಗಿತ್ತು ಎಂದು ನಾನು ಭಾವಿಸುತ್ತಾ ಬಂದಿದ್ದೆ’’ ಎಂದು ಎಕ್ಸ್ ನಲ್ಲಿ ಹಾಕಿದ ವೀಡಿಯೊವೊಂದರಲ್ಲಿ ಅವರು ಹೇಳಿದ್ದಾರೆ.

ನಾನು ಚುನಾವಣಾ ಆಯೋಗವನ್ನು 1977ರಿಂದಲೂ ಗಮನಿಸುತ್ತಾ ಬಂದಿದ್ದೇನೆ ಮತ್ತು ಕಳೆದ 35 ವರ್ಷಗಳಿಂದ ಅದರ ಬಗ್ಗೆ ಸಂಶೋಧನೆ ಮಾಡುತ್ತಿದ್ದೇನೆ, ಬರೆಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಚುನಾವಣಾ ಆಯೋಗದ ಬಗ್ಗೆ ಜಗತ್ತಿನೆಲ್ಲೆಡೆ ಉಪನ್ಯಾಸಗಳನ್ನು ಕೊಡುತ್ತಿದ್ದೆ ಮತ್ತು ಅದನ್ನು ನಾನು ಬೆಂಬಲಿಸುತ್ತಿದ್ದೆ ಎಂದಿದ್ದಾರೆ.

ಮಧ್ಯಪ್ರದೇಶದಲ್ಲಿ ಚುನಾವಣೆ ನಡೆದ ಬಳಿಕ ಏನೋ ಎಡವಟ್ಟಾಗಿದೆ ಎಂದನಿಸಿತ್ತು ಎಂದು ಹೇಳಿದ ಅವರು, ಹರ್ಯಾಣ ಮತ್ತು ಮಹಾರಾಷ್ಟ್ರದ ಚುನಾವಣೆಗಳ ಬಳಿಕ ಸಂಶಯ ಪ್ರಬಲಗೊಂಡಿತು ಎಂದರು. ಆದರೆ, ಆ ಸಂಶಯವನ್ನು ಮುಂದಿಡಲು ಪುರಾವೆ ಇರಲಿಲ್ಲ ಎಂದರು.

‘‘ಈಗ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸ್ಫೋಟಕ ಪುರಾವೆಯನ್ನು ದೇಶದ ಮುಂದೆ ಇಟ್ಟಿದ್ದಾರೆ. ಕರ್ನಾಟಕದ ಒಂದು ಕ್ಷೇತ್ರದಲ್ಲೇ ಒಂದು ಲಕ್ಷಕ್ಕೂ ಅಧಿಕ ನಕಲಿ ಮತದಾರರಿರುವುದಕ್ಕೆ ಅವರು ಪುರಾವೆ ಒದಗಿಸಿದ್ದಾರೆ. 15ರಿಂದ 20 ಶೇಕಡ ಮತಗಳಗಳನ್ನು ನಕಲಿ ಮಾಡಲಾಗಿದೆ’’ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News