×
Ad

2024-25ರಲ್ಲಿ ಚುನಾವಣೆ, ಪ್ರಚಾರಕ್ಕಾಗಿ 3,335.36 ಕೋಟಿ ರೂ. ವೆಚ್ಚ ಮಾಡಿದ ಬಿಜೆಪಿ; ವರದಿ

Update: 2026-01-20 15:21 IST

ಸಾಂದರ್ಭಿಕ ಚಿತ್ರ | Photo Credit : PTI 

ಹೊಸದಿಲ್ಲಿ: ಲೋಕಸಭಾ ಮತ್ತು ಇತರ ಎಂಟು ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆದ 2024-25ರಲ್ಲಿ ಬಿಜೆಪಿಯು ಚುನಾವಣೆ ಮತ್ತು ಪ್ರಚಾರಕ್ಕಾಗಿ 3,335.36 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿರುವ ಪಕ್ಷದ ವಾರ್ಷಿಕ ಲೆಕ್ಕ ಪರಿಶೋಧನಾ ವರದಿಯನ್ನು ಉಲ್ಲೇಖಿಸಿ The Indian Express ವರದಿ ಮಾಡಿದೆ.

ಈ ವೆಚ್ಚವು ಪಕ್ಷವು 2019-20ರಲ್ಲಿ ಲೋಕಸಭಾ ಮತ್ತು ಏಳು ವಿಧಾನಸಭಾ ಚುನಾವಣೆಗಳಿಗಾಗಿ ಖರ್ಚು ಮಾಡಿದ್ದ 1,352.92 ಕೋಟಿ ರೂ.ಗಿಂತ ಸುಮಾರು ಎರಡೂವರೆ ಪಟ್ಟು ಅಧಿಕವಾಗಿದೆ.

ಆಡಿಟ್ ವರದಿಯ ಪ್ರಕಾರ 2024-25ರಲ್ಲಿ ಬಿಜೆಪಿಯು ವೆಚ್ಚ ಮಾಡಿದ ಒಟ್ಟು 3,774.58 ರೂ.ಗಳಲ್ಲಿ ಚುನಾವಣಾ ಸಂಬಂಧಿತ ವೆಚ್ಚವು ಶೇ.88ರಷ್ಟಿದೆ.

ಅತ್ಯಂತ ಹೆಚ್ಚು,ಅಂದರೆ 2,257.05 ಕೋಟಿ ರೂ.ಗಳನ್ನು ಜಾಹೀರಾತುಗಳು ಮತ್ತು ಪ್ರಚಾರಕ್ಕೆ ವ್ಯಯಿಸಲಾಗಿದೆ. ಈ ಪೈಕಿ 1,124.96 ಕೋಟಿ ರೂ.ಗಳನ್ನು ವಿದ್ಯುನ್ಮಾನ ಮಾಧ್ಯಮಗಳಿಗೆ ಮತ್ತು 897.42 ಕೋಟಿ ರೂ.ಗಳನ್ನು ‘ಜಾಹೀರಾತು‘ ಶೀರ್ಷಿಕೆಯಡಿ ಖರ್ಚು ಮಾಡಲಾಗಿದೆ.

ಪಕ್ಷವು ವಿಮಾನ ಮತ್ತು ಹೆಲಿಕಾಪ್ಟರ್ ಪ್ರಯಾಣಕ್ಕಾಗಿ 583.08 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದರೆ, ತನ್ನ ಅಭ್ಯರ್ಥಿಗಳಿಗೆ 312.90 ಕೋಟಿ ರೂ.ಗಳ ಆರ್ಥಿಕ ನೆರವನ್ನು ಒದಗಿಸಿದೆ.

ಚುನಾವಣಾ ಆಯೋಗದ ಪ್ರಕಾರ,18ನೇ ಲೋಕಸಭಾ ಮತ್ತು ಎಂಟು ವಿಧಾನಸಭಾ ಚುನಾವಣೆಗಳ ಮೊದಲಿನ ಎರಡು ವರ್ಷಗಳಲ್ಲಿ (ಚುನಾವಣಾ ಪೂರ್ವ ಮತ್ತು ಚುನಾವಣಾ ವರ್ಷ) ಚುನಾವಣೆ ಮತ್ತು ಸಾಮಾನ್ಯ ಪ್ರಚಾರಕ್ಕಾಗಿ ಬಿಜೆಪಿಯ ವೆಚ್ಚ 5,089.42 ಕೋಟಿ ರೂ.ಗಳಾಗಿದ್ದು,ಇದು 17ನೇ ಲೋಕಸಭಾ ಮತ್ತು ಏಳು ವಿಧಾನಸಭಾ ಚುನಾವಣೆಗಳಿಗೆ ಮುಂಚಿನ ಎರಡು ವರ್ಷಗಳ ಅವಧಿಯಲ್ಲಿ ವೆಚ್ಚ ಮಾಡಿದ್ದ 2,145.31 ಕೋಟಿ ರೂ.ಗಳಿಗೆ ಹೋಲಿಸಿದರೆ ಎರಡು ಪಟ್ಟಿಗೂ ಅಧಿಕವಾಗಿದೆ.

ಈ ನಡುವೆ ಕಾಂಗ್ರೆಸ್ ಕಳೆದ ವರ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಾರ್ಷಿಕ ವರದಿಯ ಪ್ರಕಾರ,ಅದು 2024-25ರಲ್ಲಿ ಚುನಾವಣೆಗಳಿಗಾಗಿ 896.22 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದು,2023-24ರಲ್ಲಿ ಅದು 619.67 ಕೋಟಿ ರೂ.ಗಳನ್ನು ವ್ಯಯಿಸಿತ್ತು.

ವರದಿಯ ಪ್ರಕಾರ 2024-25ರಲ್ಲಿ ಬಿಜೆಪಿಯ ಒಟ್ಟು ಆದಾಯವು 2023-24ರ 4,340.47 ಕೋಟಿ ರೂ.ಗಳಿಂದ 6,769.14 ಕೋಟಿ ರೂ.ಗೆ ಏರಿಕೆಯಾಗಿತ್ತು. ಬಹುಪಾಲು ಆದಾಯ ಸ್ವಯಂಪ್ರೇರಿತ ದೇಣಿಗೆಗಳಿಂದ ಬಂದಿದ್ದು,ಇದು 6,124.85 ಕೋಟಿ ರೂ.ಗಳಷ್ಟಿದೆ. ಪಕ್ಷವು ಉಳಿದ ಆದಾಯವನ್ನು ಶುಲ್ಕಗಳು ಮತ್ತು ಚಂದಾದಾರಿಕೆಗಳು,ಬ್ಯಾಂಕ್ ಬಡ್ಡಿ ಮತ್ತು ಇತರ ಮೂಲಗಳಿಂದ ಗಳಿಸಿತ್ತು.

ಗಮನಾರ್ಹವಾಗಿ 2024-25ರಲ್ಲ ಸರ್ವೋಚ್ಚ ನ್ಯಾಯಾಲಯವು ಸರಕಾರದ ಅನಾಮಧೇಯ ರಾಜಕೀಯ ನಿಧಿ ವ್ಯವಸ್ಥೆಯಾಗಿದ್ದ ಚುನಾವಣಾ ಬಾಂಡ್ ಯೊಜನೆಯನ್ನು ರದ್ದುಗೊಳಿಸಿದ ನಂತರ ಮೊದಲ ಪೂರ್ಣ ವಿತ್ತವರ್ಷವಾಗಿತ್ತು. ಆದಾಗ್ಯೂ ಬಿಜೆಪಿಯ ಆದಾಯವು ಹಿಂದಿನ ವರ್ಷದ 3,967.14 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ.54ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಚುನಾವಣಾ ಆಯೋಗವು ಪ್ರಕಟಿಸಿದ್ದ ಬಿಜೆಪಿಯ ಚುನಾವಣಾ ದೇಣಿಗೆಗಳ ವರದಿಯ ಪ್ರಕಾರ 2024-25ರಲ್ಲಿ ಪಕ್ಷವು ಸಂಗ್ರಹಿಸಿದ್ದ ಒಟ್ಟು ದೇಣಿಗೆಗಳ ಪೈಕಿ ಶೇ.61ಷ್ಟು ಚುನಾವಣಾ ಟ್ರಸ್ಟ್‌ಗಳಿಂದ ಬಂದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News