ಎಲ್ಗಾರ್ ಪರಿಷತ್ ಪ್ರಕರಣ | ಸಾಮಾಜಿಕ ಹೋರಾಟಗಾರ್ತಿ ಜ್ಯೋತಿ ಜಗತಾಪ್ ಜಾಮೀನು ಅರ್ಜಿ ತಿರಸ್ಕೃತ
ಸುಪ್ರೀಂ ಕೋರ್ಟ್
ಹೊಸದಿಲ್ಲಿ : ಎಲ್ಗಾರ್ ಪರಿಷತ್-ಮಾವೋವಾದಿ ನಂಟು ಪ್ರಕರಣದಲ್ಲಿ ಕಾರಾಗೃಹದಲ್ಲಿರುವ ಸಾಮಾಜಿಕ ಹೋರಾಟಗಾರ್ತಿ ಜ್ಯೋತಿ ಜಗತಾಪ್ ಅವರಿಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಹಾಗೂ ಅರವಿಂದ ಕುಮಾರ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಇಬ್ಬರು ಸದಸ್ಯರ ಪೀಠ ಜ್ಯೋತಿ ಜಗತಾಪ್ ಅವರಿಗೆ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿತು ಹಾಗೂ ಪ್ರಕರಣದ ವಿಚಾರಣೆಯನ್ನು ಮುಂದೂಡಿತು.
ಜ್ಯೋತಿ ಜಗತಾಪ್ ಅವರ ಮುಖ್ಯ ಜಾಮೀನು ಅರ್ಜಿಯನ್ನು ಪೀಠ ವಿಚಾರಣೆಗೆ ಪಟ್ಟಿ ಮಾಡಿದೆ. ಆದರೆ, ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದೆ. ‘‘ನಿಮಗೆ ಮಧ್ಯಂತರ ಜಾಮೀನು ನೀಡಲು ನಾವು ಒಲವು ಹೊಂದಿಲ್ಲ’’ ಎಂದು ನ್ಯಾಯಮೂರ್ತಿ ಸುಂದರೇಶ್ ತನ್ನ ಆದೇಶದಲ್ಲಿ ಹೇಳಿದ್ದಾರೆ.
ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಉಚ್ಚ ನ್ಯಾಯಾಲಯ 17 ಅಕ್ಟೋಬರ್ 2022ರಲ್ಲಿ ನೀಡಿದ ಆದೇಶ ಪ್ರಶ್ನಿಸಿ ಜ್ಯೋತಿ ಜಗತಾಪ್ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು.