×
Ad

'ದುರಾಡಳಿತದ ಕೇಂದ್ರಬಿಂದು': ಇಂದೋರ್ ನಲ್ಲಿ ಕಲುಷಿತ ನೀರು ಕುಡಿದು ಕನಿಷ್ಠ 10 ಜನರು ಮೃತಪಟ್ಟ ಬಗ್ಗೆ ಮಧ್ಯಪ್ರದೇಶ ಸರಕಾರವನ್ನು ಟೀಕಿಸಿದ ರಾಹುಲ್ ಗಾಂಧಿ

Update: 2026-01-02 16:20 IST

ರಾಹುಲ್‌ ಗಾಂಧಿ (PTI)

ಹೊಸದಿಲ್ಲಿ: ಇಂದೋರ್‌ನ ಭಾಗೀರಥಪುರದಲ್ಲಿ ಕಲುಷಿತ ನೀರು ಕುಡಿದು ಅತಿಸಾರದಿಂದ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮಧ್ಯಪ್ರದೇಶ ಸರಕಾರ "ವಿಷ" ವಿತರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಶುದ್ಧ ನೀರು ಒಂದು ಔದಾರ್ಯವಲ್ಲ ಎಂದು ಹೇಳಿದ್ದಾರೆ. ಈ ಘಟನೆಗೆ ಡಬಲ್ ಎಂಜಿನ್ ಸರಕಾರದ ನಿರ್ಲಕ್ಷ್ಯ ನಾಯಕತ್ವವನ್ನು ದೂಷಿಸಿದರು.

"ಇಂದೋರ್‌ನಲ್ಲಿ ವಿತರಿಸಲ್ಪಟ್ಟಿದ್ದು ನೀರು ಅಲ್ಲ, ವಿಷ. ಆಡಳಿತವು ಕುಂಭಕರ್ಣನಂತೆ ನಿದ್ರೆಯಲ್ಲಿದೆ. ಪ್ರತಿ ಮನೆಯಲ್ಲೂ ದುಃಖದ ಮೋಡ ಆವರಿಸಿದೆ. ಬಡವರು ಅಸಹಾಯಕರಾಗಿದ್ದಾರೆ. ಈಗಿರುವಾಗ ಬಿಜೆಪಿ ನಾಯಕರು ಅಹಂಕಾರದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜನರಿಗೆ ಸಾಂತ್ವನ ಬೇಕಿತ್ತು; ಆದರೆ ಸರಕಾರ ಅಹಂಕಾರದಿಂದ ನಡೆದುಕೊಳ್ಳುತ್ತಿದೆ. ಜನರು ಕಲುಷಿತವಾದ, ದುರ್ವಾಸನೆ ಬೀರುವ ನೀರಿನ ಬಗ್ಗೆ ಹಲವು ಬಾರಿ ದೂರು ನೀಡಿದ್ದರು. ಆದರೆ ಯಾವುದೇ ಕ್ರಮವನ್ನು ಯಾಕೆ ಕೈಗೊಂಡಿಲ್ಲ? ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

ಕುಡಿಯುವ ನೀರಿನಲ್ಲಿ ಕೊಳಚೆ ನೀರು ಹೇಗೆ ಬೆರೆತು ಹೋಯಿತು? ಸಕಾಲದಲ್ಲಿ ನೀರು ಸರಬರಾಜನ್ನು ಏಕೆ ಸ್ಥಗಿತಗೊಳಿಸಲಿಲ್ಲ? ಜವಾಬ್ದಾರಿಯುತ ಅಧಿಕಾರಿಗಳು ಮತ್ತು ನಾಯಕರ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತೀರಿ? ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

ಶುದ್ಧ ನೀರು ಒಂದು ಔದಾರ್ಯವಲ್ಲ, ಅದು ಬದುಕುವ ಹಕ್ಕು ಮತ್ತು ಈ ಹಕ್ಕಿನ ಉಲ್ಲಂಘನೆಗೆ ಬಿಜೆಪಿಯ ಡಬಲ್-ಎಂಜಿನ್ ಸರಕಾರ, ಅದರ ನಿರ್ಲಕ್ಷ್ಯ ಆಡಳಿತ ಮತ್ತು ಅದರ ನಿರ್ದಯ ನಾಯಕತ್ವವೇ ಸಂಪೂರ್ಣ ಹೊಣೆ ಎಂದು ಹೇಳಿದರು.

ಮಧ್ಯಪ್ರದೇಶ ಈಗ ದುರಾಡಳಿತದ ಕೇಂದ್ರವಾಗಿದೆ. ಒಂದು ಕಡೆ ಕೆಮ್ಮುವಿನ ಸಿರಪ್ ಸೇವಿಸಿ ಪ್ರಾಣಹಾನಿ ಸಂಭವಿಸಿದೆ, ಸರಕಾರಿ ಆಸ್ಪತ್ರೆಗಳಲ್ಲಿ ಇಲಿಗಳು ಮಕ್ಕಳ ಜೀವಗಳನ್ನು ತೆಗೆದುಕೊಳ್ಳುತ್ತಿದೆ . ಈಗ ಕಲುಷಿತ ನೀರು ಕುಡಿದು ಹಲವು ಜನರ ಪ್ರಾಣಹಾನಿಯಾಗಿದೆ. ಬಡವರ ಪ್ರಾಣಹಾನಿಯಾಗುವಾಗ ಮೋದಿ ಜಿ ಯಾವಾಗಲೂ ಮೌನವಾಗಿರುತ್ತಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News