×
Ad

“ನನ್ನ ವಿರುದ್ಧ ಸುಳ್ಳು ಪ್ರಚಾರ ನಡೆಯುತ್ತಿದೆ”: ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಅಳಲು

“ಅಪರಾಧಿಯ ಬೆಂಬಲಕ್ಕೆ ನಿಲ್ಲುವ ಬದಲು ನ್ಯಾಯದ ಹೋರಾಟದಲ್ಲಿ ಕೈಜೋಡಿಸಿ”

Update: 2026-01-02 15:17 IST

Photo credit: PTI

ಉನ್ನಾವ್: ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ನನ್ನ ವಿರುದ್ಧ ಸುಳ್ಳು ಪ್ರಚಾರ ನಡೆಯುತ್ತಿದೆ ಎಂದು ಅಳಲನ್ನು ತೋಡಿಕೊಂಡಿದ್ದು, ಜಾತಿ ಅಡೆತಡೆಗಳನ್ನು ಮೀರಿ ಸಾರ್ವಜನಿಕ ಬೆಂಬಲವನ್ನು ಕೋರಿದ್ದಾರೆ.

ಪ್ರಕರಣದ ಅಪರಾಧಿ ಕುಲದೀಪ್ ಸೆಂಗಾರ್ ಅವರ ಪುತ್ರಿ, ನನ್ನ ತಂದೆ ನಿರಪರಾಧಿ ಎಂದು 'ಎಕ್ಸ್' ನಲ್ಲಿ ಸಾರ್ವಜನಿಕ ಬೆಂಬಲ ಕೋರಿ ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿರುವ ಸಂತ್ರಸ್ತೆ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಮತ್ತು ಪತಿಯ ಬಗ್ಗೆ ಅಪಪ್ರಚಾರದ ಅಭಿಯಾನ ನಡೆಯುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಕಳೆದ ಎರಡು ದಿನಗಳಿಂದ ಸೆಂಗಾರ್ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಮತ್ತು ಪತಿಯನ್ನು ನಿಂದಿಸುತ್ತಿದ್ದಾರೆ ಎಂದು ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಆರೋಪಿಸಿದ್ದಾರೆ. ಜನವರಿ 11 ರಂದು ಜಂತರ್ ಮಂತರ್‌ನಲ್ಲಿ ಸೆಂಗಾರ್ ಗೆ ಬೆಂಬಲಿಸಿ ಅವರ ಪುತ್ರಿ 'ಕ್ಷತ್ರಿಯ ಸಮ್ಮೇಳನ'ವನ್ನು ಕರೆದಿದ್ದಾರೆ ಎಂದು ಹೇಳುವ ಪೋಸ್ಟ್ ಅನ್ನು ಆನ್‌ಲೈನ್‌ನಲ್ಲಿ ಪ್ರಚಾರ ಮಾಡಲಾಗುತ್ತಿದೆ. ನಾನು ಕೂಡ ಕ್ಷತ್ರಿಯ ಸಮುದಾಯದ ಹೆಣ್ಣು. ನಾನು ಈ ದೇಶದ ಮಗಳು. ದಯವಿಟ್ಟು ನನ್ನ ಧ್ವನಿಯಾಗಿರಿ. ಅಪರಾಧಿಗೆ ಜಾತಿ ಇಲ್ಲ ಎಂದು ಹೇಳಿದ್ದಾರೆ.

ನ್ಯಾಯಾಂಗ ಪ್ರಕ್ರಿಯೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಪುನರುಚ್ಚರಿಸಿದ ಸಂತ್ರಸ್ತೆ, ಶಿಕ್ಷೆಗೊಳಗಾದ ಅಪರಾಧಿಯ ಬೆಂಬಲಕ್ಕೆ ನಿಲ್ಲುವ ಬದಲು ನ್ಯಾಯದ ಹೋರಾಟದಲ್ಲಿ ಸಮಾಜವು ನನ್ನೊಂದಿಗೆ ನಿಲ್ಲಬೇಕೆಂದು ಒತ್ತಾಯಿಸಿದರು.

2017ರಲ್ಲಿ ಉನ್ನಾವೊ ಅತ್ಯಾಚಾರ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಅಂದಿನ ಬಿಜೆಪಿ ಶಾಸಕ ಸೆಂಗಾರ್ ವಿರುದ್ಧ ಅತ್ಯಾಚಾರ, ಬೆದರಿಕೆ, ಕಿರುಕುಳದ ಆರೋಪವನ್ನು ಮಾಡಲಾಗಿತ್ತು. ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಕುಲದೀಪ್ ಸಿಂಗ್ ಸೆಂಗಾರ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಜೀವಾವಧಿ ಶಿಕ್ಷೆಯನ್ನು ಇತ್ತೀಚೆಗೆ ದಿಲ್ಲಿ ಹೈಕೋರ್ಟ್ ಅಮಾನತುಗೊಳಿಸಿತ್ತು. ದಿಲ್ಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News