×
Ad

Uttar Pradesh| ಮೊಬೈಲ್ ಫೋನ್‌ನಲ್ಲಿ 'ಸ್ಕ್ಯಾನ್' ಮಾಡಿ ವ್ಯಕ್ತಿಯನ್ನು ಬಾಂಗ್ಲಾದೇಶಿ ಎಂದ ಪೊಲೀಸ್ ಅಧಿಕಾರಿ: ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ

Update: 2026-01-02 12:14 IST

Screengrab: X/@SachinGuptaUP

ಗಾಝಿಯಾಬಾದ್: ಕೌಶಾಂಬಿಯಲ್ಲಿನ ಸ್ಲಂ ಪ್ರದೇಶದಲ್ಲಿ ಪರಿಶೀಲನಾ ಕಾರ್ಯಾಚರಣೆ ವೇಳೆ, ಎಸ್ಎಚ್ಒ ಒಬ್ಬರು ಸ್ಥಳೀಯ ನಿವಾಸಿಗಳ ನಿಜವಾದ ರಾಷ್ಟ್ರೀಯತೆ ತಿಳಿಯಲು ಮೊಬೈಲ್ ಫೋನ್ ಬೆನ್ನಿಗೆ ಹಿಡಿದು ಸ್ಕ್ಯಾನ್‌ ಮಾಡಿ ನೀವು ಬಾಂಗ್ಲಾದೇಶಿ ಎಂದು ಹೇಳಿದ್ದಾರೆ. ಈ ಕುರಿತ ವೀಡಿಯೊ ವೈರಲ್‌ ಆಗುತ್ತಿದ್ದಂತೆ ಉತ್ತರ ಪ್ರದೇಶ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ಮತ್ತು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.

ಸುಮಾರು 50 ಗುಡಿಸಲುಗಳನ್ನು ಹೊಂದಿರುವ ಭೋವಾಪುರ ಕೊಳಗೇರಿಯಲ್ಲಿ ಡಿಸೆಂಬರ್ 23ರಂದು ಪೊಲೀಸರು ತಪಾಸಣೆ ನಡೆಸಿದ್ದರು. ಎಲ್ಲಾ ಪರಿಶೀಲನಾ ಕಾರ್ಯಗಳು ಜನರ ಘನತೆಯನ್ನು ರಕ್ಷಿಸುವ ಸ್ಥಾಪಿತ ಶಿಷ್ಟಾಚಾರವನ್ನು ಹೊಂದಿವೆ. ಸಾಮಾನ್ಯವಾಗಿ ನಾಗರಿಕತ್ವ ಪರಿಶೀಲನೆಯು ಪಾಸ್ಪೋರ್ಟ್ ನಂತಹ ದಾಖಲೆಗಳನ್ನು ಅಥವಾ ಆಧಾರ್ ನಂತಹ ಬಯೋಮೆಟ್ರಿಕ್ಸ್ ಅನ್ನು ಅವಳಂಬಿಸಿರುತ್ತದೆ. ಆದರೆ ಕೌಶಂಬಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಅಜಯ್ ಶರ್ಮಾ ನೇತೃತ್ವದ ತಂಡ ಫೋನ್ ಸ್ಕ್ಯಾನ್ ವಿಧಾನವನ್ನು ಬಳಸಿದೆ.

26 ಸೆಕೆಂಡುಗಳ ವಿಡಿಯೋವೊಂದರಲ್ಲಿ SHO ಮತ್ತು ಇತರ ಪೊಲೀಸ್ ಅಧಿಕಾರಿಗಳು ಕೊಳೆಗೇರಿ ನಿವಾಸಿಯೊಬ್ಬರಿಗೆ ಗುರುತಿನ ಚೀಟಿ ತೋರಿಸಲು ಹೇಳಿದ್ದಾರೆ. ಅವರು ಗುರುತಿನ ಚೀಟಿಯನ್ನು ನೀಡಿ ಬಿಹಾರದ ಅರಾರಿಯಾ ನಿವಾಸಿ ಎಂದು ಹೇಳಿದ್ದಾರೆ. ಆಗ ಪೊಲೀಸ್‌ ಅಧಿಕಾರಿ ನೀವು ಬಿಹಾರದವರೇ ಅಥವಾ ಬಾಂಗ್ಲಾದೇಶದವರೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಸ್ಲಂ ನಿವಾಸಿ ನಾವು ಬಿಹಾರದವರು ಎಂದು ಉತ್ತರಿಸುತ್ತಾರೆ. ನಂತರ SHO ತನ್ನ ಬಳಿ ಒಂದು ಯಂತ್ರವಿದೆ. ಅದು ವ್ಯಕ್ತಿ ಎಲ್ಲಿಂದ ಬಂದಿದ್ದಾನೆಂದು ತಕ್ಷಣ ಹೇಳುತ್ತದೆ ಎಂದು ಹೇಳಿದ್ದಾರೆ.

ನಂತರ SHO ಒಬ್ಬ ಕಾನ್‌ಸ್ಟೆಬಲ್‌ಗೆ ಮೊಬೈಲ್ ಫೋನ್ ತಂದು ಆ ವ್ಯಕ್ತಿಯ ಬೆನ್ನಿನ ಮೇಲೆ ಇಡಲು ಹೇಳುತ್ತಾರೆ. ಯಂತ್ರವು ನೀವು ಬಾಂಗ್ಲಾದೇಶಿ ಎನ್ನುವುದನ್ನು ತೋರಿಸುತ್ತಿದೆ ಎಂದು ಶರ್ಮಾ ಅವರಿಗೆ ಹೇಳುತ್ತಾರೆ. ಆಗ ಕೊಳೆಗೇರಿ ನಿವಾಸಿ, "ಇಲ್ಲ ಸರ್, ನಾವು ಬಿಹಾರದವರು" ಎಂದು ಹೇಳುತ್ತಾರೆ. ಶರ್ಮಾ ಮುಂದುವರಿದು, ಕೊಳೆಗೇರಿಯಲ್ಲಿರುವ ಬಾಂಗ್ಲಾದೇಶಿಯರು ಯಾರು ಎಂದು ಪ್ರಶ್ನಿಸಿದ್ದಾರೆ, ಕೊಳೆಗೇರಿ ನಿವಾಸಿ ಯಾರೂ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಪರಿಶೀಲನಾ ವಿಧಾನದ ಬಗ್ಗೆ ಕೇಳಿದಾಗ, ಶರ್ಮಾ ತನ್ನ ಕ್ರಮವನ್ನು ಸಮರ್ಥಿಸಿಕೊಂಡರು. ನಾನು ಯಾವುದೇ ತಪ್ಪು ಮಾಡಿಲ್ಲ. ನಿಜವಾದ ಗುರುತನ್ನು ಬಹಿರಂಗಪಡಿಸುವಂತೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದೇನೆ. ಯಾರಿಗೂ ಕಿರುಕುಳ ನೀಡಿಲ್ಲ ಎಂದು ಹೇಳಿದರು.

ಈ ಕುರಿತು ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಜೆ.ರವೀಂದ್ರ ಗೌಡ, ನಾವು ಈ ಬಗ್ಗೆ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಯಾವುದೇ ವ್ಯಕ್ತಿಗೆ ಪೊಲೀಸರು ಕಿರುಕುಳ ನೀಡಿದರೆ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News