Uttar Pradesh | ಒಂದೇ ಕುಟುಂಬದ ಐದು ಮಂದಿಯ ನಿಗೂಢ ಸಾವು; ಗುಂಡೇಟಿಗೆ ಬಲಿ?
ಸಾಂದರ್ಭಿಕ ಚಿತ್ರ
ಸಹರಾನ್‌ಪುರ : ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಸರ್ಸಾವ ಪೊಲೀಸ್ ಠಾಣೆ ವ್ಯಾಪ್ತಿಯ ಕೌಶಿಕ್ ವಿಹಾರ್ ಕಾಲೋನಿಯ ಮನೆಯೊಂದರಲ್ಲಿ ಮಂಗಳವಾರ ಬೆಳಿಗ್ಗೆ ಒಂದೇ ಕುಟುಂಬದ ಐದು ಸದಸ್ಯರು ಗುಂಡೇಟಿಗೆ ಬಲಿಯಾಗಿ ಮೃತಪಟ್ಟಿರುವುದು ಪತ್ತೆಯಾಗಿದೆ.
ಪೊಲೀಸರ ಪ್ರಕಾರ, ಮೃತರನ್ನು ಭೂಮಾಪಕ ಅಶೋಕ್ ರಥಿ (40), ಅವರ ಪತ್ನಿ ಅಜಂತಾ (37), ತಾಯಿ ವಿದ್ಯಾವತಿ (70) ಹಾಗೂ ಪುತ್ರರಾದ ಕಾರ್ತಿಕ್ (16) ಮತ್ತು ದೇವ್ (13) ಎಂದು ಗುರುತಿಸಲಾಗಿದೆ. ಐವರ ಮೃತದೇಹಗಳು ಮನೆಯ ಒಂದೇ ಕೋಣೆಯಲ್ಲಿ ಪತ್ತೆಯಾಗಿದ್ದು, ಅಶೋಕ್ ರಥಿ ಅವರ ಮೃತದೇಹದ ಬಳಿ ಮೂರು ಲೋಡ್ ಮಾಡಿದ ಪಿಸ್ತೂಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಹರಾನ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆಶಿಶ್ ತಿವಾರಿ ಅವರು, ಮೃತರೆಲ್ಲರ ತಲೆಗೆ ಗುಂಡೇಟಿನ ಗಾಯಗಳಿದ್ದು, ಗುಂಡು ಹಾರಿಸಿರುವುದು ಅತಿಹತ್ತಿರದಿಂದ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದರು. ವಶಪಡಿಸಿಕೊಂಡ ಪಿಸ್ತೂಲ್‌ಗಳು ದೇಶೀಯ ನಿರ್ಮಿತವಾಗಿದ್ದು, ಅವುಗಳಿಗೆ ಪರವಾನಗಿ ಇದೆಯೇ ಎಂಬುದನ್ನು ದೃಢಪಡಿಸಲಾಗುತ್ತಿದೆ ಎಂದರು.
ಘಟನೆಯ ಮಾಹಿತಿ ಲಭಿಸಿದ ತಕ್ಷಣ ಡಿಐಜಿ ಅಭಿಷೇಕ್ ಸಿಂಗ್, ಎಸ್‌ಎಸ್‌ಪಿ ಆಶಿಶ್ ತಿವಾರಿ, ಎಸ್‌ಪಿ (ಗ್ರಾಮೀಣ) ಸಾಗರ್ ಜೈನ್ ಹಾಗೂ ವಿಧಿವಿಜ್ಞಾನ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಕುಟುಂಬದ ಹಿನ್ನೆಲೆ, ಆರ್ಥಿಕ ಸ್ಥಿತಿ ಹಾಗೂ ಇತ್ತೀಚಿನ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಪ್ರಾಥಮಿಕ ಮಾಹಿತಿಯಂತೆ, ಅಶೋಕ್ ರಥಿ ತಮ್ಮ ತಂದೆಯ ನಿಧನದ ನಂತರ ಅನುಕಂಪದ ಆಧಾರದ ಮೇಲೆ ಭೂಮಾಪಕ ಹುದ್ದೆ ಪಡೆದಿದ್ದು, ನಕುರ್ ತಹಸಿಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ಇಬ್ಬರು ಪುತ್ರರು ಕ್ರಮವಾಗಿ 10 ಮತ್ತು 11ನೇ ತರಗತಿಗಳಲ್ಲಿ ಓದುತ್ತಿದ್ದರು ಎಂದು ತಿಳಿದು ಬಂದಿದೆ.