ಕೇರಳ | ಎಫ್-35 ಬಿ ಯುದ್ಧ ವಿಮಾನ ʼಸಿ-17 ಗ್ಲೋಬ್‌ಮಾಸ್ಟರ್ʼ ಮೂಲಕ ಬ್ರಿಟನ್‌ಗೆ ಏರ್‌ಲಿಫ್ಟ್ ಸಾಧ್ಯತೆ
PC : NDTV
ತಿರುವನಂತಪುರಂ: ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಬ್ರಿಟಿಷ್ ಎಫ್-35 ಬಿ ಯುದ್ಧ ವಿಮಾನವನ್ನು ʼಸಿ-17 ಗ್ಲೋಬ್‌ಮಾಸ್ಟರ್ ಸಾರಿಗೆ ವಿಮಾನʼದಲ್ಲಿ ಏರ್‌ಲಿಫ್ಟ್ ಮಾಡುವ ಬಗ್ಗೆ ಬ್ರಿಟನ್ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
ತಾಂತ್ರಿಕ ದೋಷದಿಂದಾಗಿ ಬ್ರಿಟಿಷ್ ಎಫ್-35ಬಿ ಫೈಟರ್ ಜೆಟ್ ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. 19 ದಿನಗಳ ಬಳಿಕವೂ ಯುದ್ಧವಿಮಾನದ ದುರಸ್ತಿ ಕಾರ್ಯದಲ್ಲಿ ಯಾವುದೇ ಯಶಸ್ವಿ ಕಂಡು ಬಂದಿಲ್ಲ ಎಂದು ವರದಿಯಾಗಿದೆ.
ಬ್ರಿಟಿಷ್ ಹೈಕಮಿಷನ್ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಎಫ್-35 ಬಿ ವಿಮಾನವು ʼಎಚ್ಎಂಎಸ್ ಪ್ರಿನ್ಸ್ ಆಫ್ ವೇಲ್ಸ್ʼಗೆ ಹಿಂತಿರುಗಲು ಸಾಧ್ಯವಾಗಲಿಲ್ಲ. ಸುರಕ್ಷತೆಗೆ ಆದ್ಯತೆ ನೀಡಿ ವಿಮಾನವನ್ನು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ಅಲ್ಲಿ ಅದು ಸುರಕ್ಷಿತವಾಗಿ ಇಳಿದಿದೆ. ತುರ್ತು ಭೂ ಸ್ಪರ್ಶದ ಬಳಿಕ ವಿಮಾನದಲ್ಲಿ ತಾಂತ್ರಿಕದೋಷ ಕಂಡು ಬಂದಿದೆ ಎಂದು ಹೇಳಿದೆ.
ಮೂಲಗಳ ಪ್ರಕಾರ, ವಿಮಾನ ನಿಲ್ದಾಣದ ಅಧಿಕಾರಿಗಳು, ಭಾರತೀಯ ವಾಯುಪಡೆಯ ಸಮನ್ವಯದೊಂದಿಗೆ, ಜೆಟ್ ಅನ್ನು ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆಗೆ ಸ್ಥಳಾಂತರಿಸಲು ಸಿದ್ಧತೆ ನಡೆಸುತ್ತಿದ್ದರು. ಯುದ್ಧವಿಮಾನದ ಆರಂಭಿಕ ತಪಾಸಣೆಯನ್ನು ಕೂಡ ನಡೆಸಲಾಗಿದೆ. ಆದರೆ ಸಮಸ್ಯೆಯನ್ನು ಪರಿಹರಿಸಲು ನಂತರದ ಪ್ರಯತ್ನಗಳು ವಿಫಲವಾಗಿದೆ ಎಂದು ಹೇಳಲಾಗಿದೆ.