×
Ad

ಕಾರಿನಡಿಗೆ ಬಿದ್ದು ಕಾರ್ಯಕರ್ತ ಮೃತ್ಯು: ಆಂಧ್ರ ಮಾಜಿ ಸಿಎಂ ಜಗನ್ ವಿರುದ್ಧ ಪ್ರಕರಣ ದಾಖಲು

Update: 2025-06-23 15:14 IST

Screebgrab: X

ಗುಂಟೂರು (ಆಂಧ್ರಪ್ರದೇಶ): ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಬೆಂಗಾವಲು ಪಡೆ ವಾಹನದಡಿ ಸಿಲುಕಿ ವೈಎಸ್ಆರ್ಸಿಪಿ ಪಕ್ಷದ ಕಾರ್ಯಕರ್ತರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ, ಅವರನ್ನೂ ಈ ಪ್ರಕರಣದಲ್ಲಿ ಆರೋಪಿಯನ್ನಾಗಿಸಲಾಗಿದೆ ಎಂದು ರವಿವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ವೈಎಸ್ಆರ್ಸಿಪಿ ಕಾರ್ಯಕರ್ತರೊಬ್ಬರ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಜೂನ್ 18ರಂದು ಜಗನ್ ಮೋಹನ್ ರೆಡ್ಡಿ ಅವರು ಪಲ್ನಾಡು ಜಿಲ್ಲೆಯ ರೆಂಟಪಲ್ಲ ಗ್ರಾಮಕ್ಕೆ ತೆರಳುತ್ತಿದ್ದರು. ಅಲ್ಲಿ ಪಕ್ಷದ ವತಿಯಿಂದ ಸಮಾವೇಶವೊಂದನ್ನು ಆಯೋಜಿಸಲಾಗಿತ್ತು. ಈ ಸಮಾವೇಶದ ವೇಳೆ, ಗುಂಟೂರು ನಗರದ ಹೊರವಲಯದಲ್ಲಿರುವ ಎಟುಕೂರು ಬಳಿ ಜಗನ್ ಮೋಹನ್ ರೆಡ್ಡಿ ಅವರ ಬೆಂಗಾವಲು ಪಡೆ ವಾಹನಕ್ಕೆ ಸಿಲುಕಿ, ವೈಎಸ್ಆರ್ಸಿಪಿ ಪಕ್ಷದ ಹಿರಿಯ ಕಾರ್ಯಕರ್ತ ಚೀಲಿ ಸಿಂಗಯ್ಯ ಎಂಬವರು ಮೃತಪಟ್ಟಿದ್ದರು.

ಈ ಅಪಘಾತದ ಹಲವು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಈ ಕುರಿತು ರವಿವಾರ ತಡರಾತ್ರಿ ಸುದ್ದಿಗೋಷ್ಠಿ ನಡೆಸಿದ ಗುಂಟೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಸತೀಶ್ ಕುಮಾರ್, “ಈ ಅಪಘಾತಕ್ಕೆ ಸಂಬಂಧಿಸಿದಂತೆ ವಿವಿಧ ಸಾಕ್ಷ್ಯಗಳನ್ನು ಪರಿಶೀಲಿಸಲಾಗಿದ್ದು, ಮೃತ ಚೀಲಿ ಸಿಂಗಯ್ಯ ಅವರು ಜಗನ್ ಮೋಹನ್ ರೆಡ್ಡಿ ಅವರ ಕಾರಿನಡಿ ಸಿಲುಕಿರುವುದು ಕಂಡು ಬಂದಿದೆ” ಎಂದು ತಿಳಿಸಿದ್ದಾರೆ.

ಅಪಘಾತದಲ್ಲಿ ತೀವ್ರ ರಕ್ತಸ್ರಾವಕ್ಕೀಡಾಗಿದ್ದ ಸಿಂಗಯ್ಯ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಅವರು ಹೇಳಿದ್ದಾರೆ.

ಈ ಸಂಬಂಧ, ಸಿಂಗಯ್ಯ ಅವರ ಪತ್ನಿ ಸ್ಥಳೀಯ ಪೊಲೀಸ್ ಠಾಣೆಗೆ ನೀಡಿದ ದೂರನ್ನು ಆಧರಿಸಿ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106 (1) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಮೊದಲಿಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ, ಸಿಸಿಟಿವಿ ದೃಶ್ಯಾವಳಿಗಳು, ಡ್ರೋನ್ ದೃಶ್ಯಾವಳಿಗಳು ಹಾಗೂ ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ, ಜಗನ್ ಮೋಹನ್ ರೆಡ್ಡಿ ಅವರ ಬೆಂಗಾವಲು ಪಡೆ ವಾಹನ ಸಿಂಗಯ್ಯನವರ ಮೇಲೆ ಹರಿದಿರುವುದು ದೃಢಪಟ್ಟಿರುವುದರಿಂದ, ಬಳಿಕ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105 (ಹತ್ಯೆಗೆ ಸಮಾನವಲ್ಲದ ನರಹತ್ಯೆ) ಹಾಗೂ ಸೆಕ್ಷನ್ 49 (ಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ಬೆನ್ನಿಗೇ, ಪೊಲೀಸರು ತಮ್ಮ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಈ ಪ್ರಕರಣದ ಇತರ ಆರೋಪಿಗಳ ಪಟ್ಟಿಯಲ್ಲಿ ಜಗನ್ ಮೋಹನ್ ರೆಡ್ಡಿ, ಅವರ ಚಾಲಕ ರಮಣ ರೆಡ್ಡಿ, ಆಪ್ತ ಸಹಾಯಕ ಕೆ.ನಾಗೇಶ್ವರ ರೆಡ್ಡಿ, ವೈಎಸ್ಆರ್ಸಿಪಿ ಹಿರಿಯ ನಾಯಕ ವೈ.ವಿ.ಸುಬ್ಬಾರೆಡ್ಡಿ, ಮಾಜಿ ಶಾಸಕ ಪೆರ್ಣಿ ವೆಂಕಟರಾಮಯ್ಯ ಹಾಗೂ ಮಾಜಿ ಸಚಿವ ವಿಡದಲ ರಜಿನಿ ಸೇರಿದ್ದಾರೆ ಎಂದು ಗುಂಟೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಸತೀಶ್ ಕುಮಾರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News