ಐಎಎಫ್ ಗೆ ಮೊದಲ ಸಿ-295 ಸಾಗಾಟ ವಿಮಾನ ಸೇರ್ಪಡೆ
ರಾಜ್ ನಾಥ್ ಸಿಂಗ್ | Photo: PTI
ಹೊಸದಿಲ್ಲಿ: ಹಿಂಡೊನ್ ವಾಯು ನೆಲೆಯಲ್ಲಿ ಸೋಮವಾರ ಭಾರತೀಯ ವಾಯು ಪಡೆ (ಐಎಎಫ್)ಗೆ ಮೊದಲ ಸಿ-295 ಮಧ್ಯಮ ಗಾತ್ರದ ಸಾಗಾಟ ವಿಮಾನವನ್ನು ಸೇರ್ಪಡೆಗೊಳಿಸಲಾಯಿತು. ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.
ಸೆಪ್ಟಂಬರ್ 13ರಂದು ಸಿ-295 ವಿಮಾನವನ್ನು ದಕ್ಷಿಣ ಸ್ಪೇನಿನ ನಗರ ಸೆವಿಲ್ ನಲ್ಲಿ ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಗಿತ್ತು. ಏರ್ ಚೀಫ್ ಮಾರ್ಶಲ್ ವಿ.ಆರ್. ಚೌಧರಿ ವಿಮಾನವನ್ನು ಸ್ವೀಕರಿಸಿದ್ದರು. ಅದು ಸೆಪ್ಟಂಬರ್ 20ರಂದು ಗುಜರಾತಿನ ವಡೋದರದಲ್ಲಿ ಬಂದಿಳಿಯಿತು.
ಎರಡು ವರ್ಷಗಳ ಹಿಂದೆ, ಐವತ್ತಾರು ಸಿ-295 ವಿಮಾನಗಳಿಗಾಗಿ ಭಾರತವು ಏರ್ಬಸ್ ಡಿಫೆನ್ಸ್ ಆ್ಯಂಡ್ ಸ್ಪೇಸ್ ಜೊತೆಗೆ 21,935 ಕೋಟಿ ರೂಪಾಯಿ ಮೊತ್ತದ ಒಪ್ಪಂದವನ್ನು ಮಾಡಿತ್ತು. ಸೇವೆಯಿಂದ ಹಿಂದೆ ಸರಿಯಲಿರುವ ಆವ್ರೊ-748 ವಿಮಾನಗಳ ಸ್ಥಾನ ತುಂಬಲು ಈ ವಿಮಾನಗಳನ್ನು ಭಾರತ ಖರೀದಿಸುತ್ತಿದೆ.
ಈ ಒಪ್ಪಂದದ ಪ್ರಕಾರ, ಏರ್ಬಸ್ ಮೊದಲ 16 ವಿಮಾನಗಳನ್ನು ಸಂಪೂರ್ಣವಾಗಿ ಹಾರಾಟಕ್ಕೆ ಸಿದ್ಧವಾಗಿರುವ ಸ್ಥಿತಿಯಲ್ಲಿ ಸೆವಿಲ್ನಲ್ಲಿರುವ ತನ್ನ ಕೊನೆಯ ಜೋಡಣಾ ಘಟಕದಿಂದ 2025ರ ವೇಳೆಗೆ ನೀಡಲಿದೆ. ಉಳಿದ 40 ವಿಮಾನಗಳನ್ನು ಭಾರತದಲ್ಲಿ ಟಾಟಾ ಅಡ್ವಾನ್ಸ್ ಡ್ ಸಿಸ್ಟಮ್ಸ್ (ಟಿಎಎಸ್ಎಲ್)ನಲ್ಲಿ ನಿರ್ಮಿಸಿ ಜೋಡಿಸಲಾಗುವುದು.